ನವದೆಹಲಿ: 'ವಯನಾಡ್‌ನ ಜನರಿಗೆ ನನ್ನ ಹೃದಯದಲ್ಲಿ ಬಹಳ ವಿಶೇಷವಾದ ಸ್ಥಾನವಿದೆ. ಆ ಜನರನ್ನು ಪ್ರತಿನಿಧಿಸಲು ನನ್ನ ಸಹೋದರಿಗಿಂತ ಉತ್ತಮರನ್ನು ನಾನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ' ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರ ಅವರು ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಯುಡಿಎಫ್ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ. ಮಂಗಳವಾರ ರಾಹುಲ್ ಹಾಗೂ ಪ್ರಿಯಾಂಕಾ ಕೇರಳಕ್ಕೆ ತೆರಳಲಿದ್ದಾರೆ. ಇದಕ್ಕೂ ಮುನ್ನ ರಾಹುಲ್ ಅವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ.
'ಈ ಕ್ಷೇತ್ರದ ಬೇಕು-ಬೇಡಗಳ ಕುರಿತು ಸಂಸತ್ತಿನಲ್ಲಿ ಆಕೆ ಶಕ್ತಿಯುತವಾಗಿ ತನ್ನ ಧ್ವನಿ ಇರಿಸಲಿದ್ದಾಳೆ ಎನ್ನುವ ಬಗ್ಗೆ ನನಗೆ ಬಲವಾದ ನಂಬಿಕೆ ಇದೆ' ಎಂದು ಹೇಳಿದ ರಾಹುಲ್, ನಾಮಪತ್ರಕ್ಕೂ ಮುನ್ನ ಆಯೋಜನೆಗೊಂಡಿರುವ ರೋಡ್‌ಶೊನಲ್ಲಿ ಭಾಗವಹಿಸುವಂತೆ ಜನರಲ್ಲಿ ಕೋರಿದ್ದಾರೆ. 'ನಾವೆಲ್ಲರೂ ಒಗ್ಗೂಡಿ ವಯನಾಡ್ ಇನ್ನು ಮುಂದೆಯೂ ಪ್ರೀತಿಯನ್ನು ಪ್ರತಿನಿಧಿಸುವಂತೆ ಮಾಡೋಣ' ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.