ಮಂಜೇಶ್ವರ: :ಡಿವೈಎಫ್‍ಐ ಕಾಸರಗೋಡು ಜಿಲ್ಲಾ ಸಮಿತಿ ಮಾಜಿ ಮಹಿಳಾ ನೇತಾರೆ, ಸಚಿತಾ ರೈ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಕೇಸು ದಾಖಲಾಗಿದೆ. ಮಂಜೇಶ್ವರ ಕಡಂಬಾರ್ ಮೂಡಂಬೈಲ್ ನಿವಾಸಿ ಮೋಕ್ಷಿತ್ ಶೆಟ್ಟಿ ಎಂಬವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ಅಬಕರಿ ಇಲಾಖೆಯಲ್ಲಿ ಉದ್ಯೋಗ ದೊರಕಿಸಿಕೊಡು ಭರವಸೆಯೊಂದಿಗೆ ಒಂದು ಲಕ್ಷ ರೂ. ಪಡೆದು ಕೆಲಸ ನೀಡದೆ, ಕೊಟ್ಟ ಹಣವನ್ನೂ ವಾಪಾಸುಮಾಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಪುತ್ತಿಗೆ ಪಂಚಾಯಿತಿಯ ಬಾಡೂರು ಕಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಸಚಿತಾ ರೈ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಡುವ ಭರವಸೆ ನೀಡಿ, ಬಡಜನತೆಯಿಂದ ಲಕ್ಷಾಂತರ ರೂ. ಪಡೆದು ವಂಚಿಸಿರುವ ಆರೋಪ ಹೊತ್ತಿದ್ದಾಳೆ. ಈಗಾಗಲೇ ಕುಂಬಳೆ, ಬದಿಯಡ್ಕ, ಮಂಜೇಶ್ವರ ಹಾಗೂ ಉಪ್ಪಿನಂಗಡಿ ಠಾಣೆಯಲ್ಲೂ ಈಕೆ ವಿರುದ್ಧ ಕೇಸು ದಾಖಲಾಗಿದೆ. ಕಾಸರಗೋಡು ಹಾಗೂ ದ.ಕ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ವಂಚನೆಯ ಮತ್ತಷ್ಟು ಕೇಸು ದಾಖಲಾಗುತ್ತಿದ್ದು, ದಿನಕಳೆದಂತೆ ವಂಚನಾ ಜಾಲ ವಿಸ್ತಾರಗೊಳ್ಳುತ್ತಿದ್ದು, ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಆರೋಪಿ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ಚುರುಕುಗೊಳಿಸಿದೆ.