ತಿರುವನಂತಪುರ: ಸಿಪಿಎಂ ಕಾರ್ಯಕರ್ತರೊಬ್ಬರ ಕೊಲೆ ಪ್ರಕರಣದಲ್ಲಿ ಆರ್‌ಎಸ್‌ಎಸ್-ಬಿಜೆಪಿಯ ನಾಲ್ವರು ಕಾರ್ಯಕರ್ತರಿಗೆ ಕೇರಳದ ಕಣ್ಣೂರು ಜಿಲ್ಲೆಯ ತಲಶ್ಶೇರಿಯ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ.
ಸಿಪಿಎಂ ಕಾರ್ಯಕರ್ತ ಸಿ. ಅಶ್ರಫ್ ಅವರನ್ನು ರಾಜಕೀಯ ವೈಷಮ್ಯದ ಕಾರಣಕ್ಕೆ 2011ರ ಮೇ 19ರಂದು ಕೊಲೆ ಮಾಡಲಾಗಿತ್ತು.
ಎಂ. ಪ್ರನುಬಾಬು, ವಿ. ಶಿಜಿಲ್, ಆರ್.ವಿ. ನಿಧೀಶ್, ಕೆ. ಉಜೇಶ್ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ಅಪರಾಧಿಗಳಿಗೆ ತಲಾ ₹80 ಸಾವಿರ ದಂಡ ಕೂಡ ವಿಧಿಸಲಾಗಿದೆ. ಈ ಹಣವನ್ನು ಮೃತ ಅಶ್ರಫ್ ಅವರ ಕುಟುಂಬದ ಸದಸ್ಯರಿಗೆ ನೀಡಬೇಕಿದೆ.
ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಎಂಟು ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪೈಕಿ ಇಬ್ಬರು ಈಗಾಗಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರನ್ನು ದೋಷಮುಕ್ತಗೊಳಿಸಲಾಗಿದೆ.