ಇತ್ತೀಚೆಗಷ್ಟೇ ಗಾಯಕಿ ಅಮೃತಾ ಸುರೇಶ್ (Amrutha Suresh) ಹಾಗೂ ಅವರ ಮಾಜಿ ಪತಿ, ನಟ ಬಾಲ (Bala) ಅವರ ಪುತ್ರಿ ಅವಂತಿಕ ತಂದೆಯ ಮಾತುಗಳಿಂದ ತೀವ್ರ ಬೇಸತ್ತು, ವಿಡಿಯೋ ಸಂದೇಶ ಹಂಚಿಕೊಂಡಿದ್ದರು. ನಿನ್ನ ಪ್ರೀತಿಸಲು ಒಂದೇ ಒಂದು ಕಾರಣವೂ ಉಳಿದಿಲ್ಲ. ಈತನ ಮಾತನ್ನು ಯಾರೂ ಸಹ ನಂಬಬೇಡಿ ಎಂದು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಿದ್ದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಪತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ಅಮೃತಾ, ದಾಂಪತ್ಯ ಜೀವನದಲ್ಲಿ ತಾನು ಅನುಭವಿಸಿದ ಚಿತ್ರಹಿಂಸೆಯನ್ನು ಎಳೆ ಎಳೆಯಾಗಿ ವಿಡಿಯೋ ಮುಖೇನ ಬಿಚ್ಚಿಟ್ಟು, ಕಣ್ಣೀರಿಟ್ಟಿದ್ದರು. ಅಂದಿನಿಂದಲೂ ಭಾರೀ ವಿವಾದ, ಟೀಕೆಗಳನ್ನು ಎದುರಿಸುತ್ತಿದ್ದ ಬಾಲಾ, ಇದೀಗ ನಾನು ಮತ್ತೊಂದು ಮದುವೆಗೆ ಸಿದ್ಧವಾಗಿದ್ದೇನೆ ಎಂಬ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ.
ಕಳೆದ ತಿಂಗಳು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ನಟ ಬಾಲಾ, ಇದೀಗ ಮತ್ತೊಮ್ಮೆ ತಮ್ಮ ಹೇಳಿಕೆ ಮೂಲಕ ಮುನ್ನೆಲೆಗೆ ಬಂದಿದ್ದಾರೆ. ಮಾಜಿ ಪತ್ನಿ ಮತ್ತು ಮಗಳ ವಿಚಾರದಲ್ಲಿ ಭಾರೀ ಟೀಕೆ, ವಿವಾದ ಎದುರಿಸುತ್ತಿರುವ ನಡುವೆಯೇ ನಾನು ಮತ್ತೊಂದು ಮದುವೆಯಾಗಲು ರೆಡಿಯಿದ್ದೇನೆ ಎಂದಿದ್ದಾರೆ. ತನ್ನ ನಿರ್ಧಾರದ ಬಗ್ಗೆ ಮುಕ್ತವಾಗಿ ಮಾತನಾಡಿದ ನಟ, ನಾನು ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲು ಬಯಸಿದ್ದೇನೆ. ಸದ್ಯಕ್ಕೆ ಭಾವಿ ಪತ್ನಿಯ ಫೋಟೋ, ಹೆಸರು ಯಾವುದನ್ನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ. ಇದು ನನ್ನ ಖಾಸಗಿ ವಿಷಯವಾದ ಕಾರಣ ದಯವಿಟ್ಟು ಯಾರು ಪ್ರಶ್ನಿಸಬೇಡಿ ಎಂದಿದ್ದಾರೆ.
ಮತ್ತೊಂದು ಮದುವೆಯಾಗಲು ನಾನು ದೃಢವಾಗಿ ನಿರ್ಧರಿಸಿದ್ದೇನೆ. ವಿಶೇಷವಾಗಿ ಮಾಧ್ಯಮಗಳು ನನ್ನ ಖಾಸಗಿತನಕ್ಕೆ ತೊಂದರೆ ಮಾಡಬೇಡಿ. ನನ್ನ ಭಾವಿ ಪತ್ನಿಯ ಕುರಿತಾದ ಫೋಟೋ, ಹೆಸರು ಅಥವಾ ಯಾವುದೇ ಮಾಹಿತಿಯನ್ನು ನಾನು ಈ ಸಂದರ್ಭದಲ್ಲಿ ಕೊಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಸದ್ಯ ನಟನ ಈ ದಿಢೀರ್ ನಿರ್ಧಾರ ಅವರ ಅಭಿಮಾನಿ ಹಾಗೂ ಹಲವರಲ್ಲಿ ಭಾರೀ ಅಚ್ಚರಿ ಮೂಡಿಸಿದೆ ಎಂದೇ ಹೇಳಬಹದು.