ನವದೆಹಲಿ: ಕೋಲ್ಕತ್ತದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಟ್ರೇನಿ ವೈದ್ಯೆಯ ಮೇಲೆ ನಡೆದಿದ್ದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸಂಜಯ್ ರಾಯ್ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದೆ.
'ಸ್ಥಳೀಯ ಪೊಲೀಸರಿಗೆ ಸ್ವಯಂಸೇವಕನಂತೆ ಕೆಲಸ ಮಾಡುತ್ತಿದ್ದ ಸಂಜಯ್ ರಾಯ್‌ನೇ ಕೊಲೆ ಪ್ರಕರಣದ ಪ್ರಮುಖ ಆರೋಪಿ' ಎಂದು ಕೋಲ್ಕತ್ತದ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಸಿಬಿಐ ಉಲ್ಲೇಖಿಸಿದೆ.
ಆಗಸ್ಟ್ 9ರಂದು ಬೆಳಗ್ಗಿನ ಜಾವ ಸೆಮಿನಾರ್ ಕೊಠಡಿಗೆ ಸಂಜಯ್‌ರಾಯ್ ಪ್ರವೇಶಿಸಿದ್ದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿತ್ತು. ಇದರ ಆಧಾರದಲ್ಲಿ ಆ.10ರಂದು ಆರೋಪಿಯನ್ನು ಕೋಲ್ಕತ್ತ ಪೊಲೀಸರು ಬಂಧಿಸಿದ್ದರು.
ಕಲ್ಕತ್ತ ಹೈಕೋರ್ಟ್ ಆದೇಶದಂತೆ, ಆ.14ರಂದು ಇಡೀ ಪ್ರಕರಣದ ವಿಚಾರಣೆಯನ್ನು ಸಿಬಿಐ ಆರಂಭಿಸಿತ್ತು. ಆರೋಪಿಯನ್ನು ವಶಕ್ಕೆ ಪಡೆದು, ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿ ವಿಸ್ತೃತ ವಿಚಾರಣೆಗೂ ಒಳಪಡಿಸಿತ್ತು. ಮಂಪರು ಪರೀಕ್ಷೆಗೆ ಆರೋಪಿ ಒಪ್ಪಿಗೆ ನೀಡದ ಕಾರಣ, ಸಿಬಿಐ ಈ ಪರೀಕ್ಷೆ ನಡೆಸಿರಲಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲಾ ಪೊಲೀಸ್ ಠಾಣೆಯ ಠಾಣಾಧಿಕಾರಿ ಅಭಿಜಿತ್ ಮೊಂಡಲ್, ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ಕೂಡ ಸಿಬಿಐ ಬಂಧಿಸಿತ್ತು. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಘೋಷ್ ವಿರುದ್ಧ ಸಿಬಿಐ ಮತ್ತೊಂದು ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಯುತ್ತಿದೆ.
ಆ.9ರಂದು ಬೆಳಿಗ್ಗೆ 9.30ರ ವೇಳೆಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು ಎಂದಿನಂತೆ ರೋಗಿಗಳನ್ನು ತಪಾಸಣೆ ಮಾಡಲು ವಾರ್ಡ್‌ಗೆ ತೆರಳಿದ್ದ ವೇಳೆ ಟ್ರೇನಿ ವೈದ್ಯೆಯ ದೇಹವನ್ನು ಗಮನಿಸಿದ್ದರು. 'ವೈದ್ಯೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ' ಎಂದು ಸ್ಥಳೀಯ ತಾಲಾ ಠಾಣೆಗೆ ಮಾಹಿತಿ ನೀಡಿದ್ದರೂ ಕೂಡ ಪೊಲೀಸ್ ಠಾಣೆಯ ಅಧಿಕಾರಿಗಳು 10.30ರ ವೇಳೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.
ಕಿರಿಯ ವೈದ್ಯೆಯ ಹತ್ಯೆ ವಿಚಾರವು ಇಡೀ ದೇಶದಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ಕೆಲಸದ ಸ್ಥಳದಲ್ಲಿ ಹೆಚ್ಚಿನ ಭದ್ರತೆ ಒದಗಿಸುವಂತೆ ಒತ್ತಾಯಿಸಿದ್ದರು.