ಕಾನ್ಪುರ: ಮಹಿಳಾ ಕಾನ್‌ಸ್ಟೆಬಲ್ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವುದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಅಯೋಧ್ಯೆಯ ಮೀಸಲು ಪೊಲೀಸ್ ಪಡೆಯಲ್ಲಿ ಹಿರಿಯ ಕಾನ್‌ಸ್ಟೆಬಲ್ ಆಗಿರುವ ಸಂತ್ರಸ್ತೆಯು 'ಕರ್ವಾ ಚೌತ್' ಹಬ್ಬದ ಆಚರಣೆಗೆಂದು ಕಾನ್ಪುರದ ಬಳಿ ಇರುವ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಶನಿವಾರ ರಾತ್ರಿ ಈ ಘಟನೆ ನಡೆದಿದೆ.
ಮಹಿಳೆಯು ತಮ್ಮ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ದಾರಿಯಲ್ಲಿ ಸಿಕ್ಕ ಪರಿಚಿತ ವ್ಯಕ್ತಿ ಧರ್ಮೇಂದ್ರ ಪಾಸ್ವಾನ್ ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ಬಿಡುವುದಾಗಿ ಹೇಳಿದ್ದಾನೆ. ಆದರೆ, ಮನೆಗೆ ಕರೆದುಕೊಂಡು ಹೋಗದೇ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಆರೋಪಿಯು ತನ್ನ ಮೇಲೆ ಅತ್ಯಾಚಾರ ಎಸಗಲು ಮುಂದಾದ ವೇಳೆ ಮಹಿಳೆಯು ಸಹಾಯಕ್ಕಾಗಿ ಕೂಗಿದ್ದಾರೆ. ಆದರೆ, ಯಾರೂ ಸಹಾಯಕ್ಕೆ ಧಾವಿಸಿಲ್ಲ. ಬಳಿಕ ಆತನ ಕೈಬೆರಳನ್ನು ಬಲವಾಗಿ ಕಚ್ಚಿ ಆಕೆ ಪಾರಾಗಿದ್ದಾರೆ.
ನಂತರ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಮಹಿಳೆಯು ದೂರು ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು 14 ದಿನ ನ್ಯಾಯಾಂಗ ವಶಕ್ಕೆ ನೀಡಿ ಆದೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.