ಕಾಸರಗೋಡು: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಂಡಲ-ಮಕರ ಜ್ಯೋತಿ ತೀರ್ಥಾಟನೆ ಕಾಲಾವಧಿಯಲ್ಲಿ ಬದ್ರತಾ ಹೊಣೆಗಾರಿಕೆ ವಹಿಸಿಕೊಟ್ಟಿರುವ ಐವರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಕಾಸರಗೋಡಿನ ಹೆಚ್ಚುವರಿ ಎಸ್.ಪಿ ಬಾಲಕೃಷ್ಣನ್ ನಾಯರ್ ಒಳಗೊಂಡಿದ್ದಾರೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಶೇಖ್ ದರ್ವೇಶ್ ಸಾಹೇಬ್ ಅವರ ನಿರ್ದೇಶ ಮೇರೆಗೆ ಪ್ರತಿಯೊಬ್ಬ ಹೆಚ್ಚುವರಿ ಎಸ್‍ಪಿಗೆ ಹೊಣೆಗಾರಿಕೆ ವಹಿಸಿಕೊಡಲಾಗಿದೆ. ನ. 14ರಿಂದ 25ರ ವರೆಗೆ ಸನ್ನಿದಾನದಲ್ಲಿ ಬಾಲಕೃಷ್ಣನ್ ನಾಯರ್ ಭದ್ರತಾ ಹೊಣೆಗಾರಿಕೆ ವಹಿಸಿಕೊಳ್ಳಲಿದ್ದಾರೆ. ಕಾಸರಗೋಡಿನಲ್ಲಿ ಈ ಹಿಂದೆ ಡಿವೈಎಸ್‍ಪಿಯಾಗಿ ಕರ್ತವ್ಯ ನಿರ್ವಹಿಸಿ ಪ್ರಸಕ್ತ ಎಎಸ್‍ಪಿಯಾಗಿ ಬಡ್ತಿ ಹೊಂದಿರುವ ಕೆ.ವಿ ವೇಣುಗೋಪಾಲ್, ಇತರ ಹೆಚ್ಚುವರಿ ಎಸ್‍ಪಿಗಳಾದ ಪಿ.ಸಿ ಹರಿದಾಸನ್, ಟಿ.ಎಸ್ ಸಜೀವ್, ಎಂ.ಆರ್ ಸತೀಶ್ ಕುಮಾರ್, ಹಾಗೂ ಎಂ.ಪಿ ವಿನೋದ್ ಅವರು ಸನ್ನಿದಾನದಲ್ಲಿ ಭದ್ರತಾ ಹೊಣೆಗಾರಿಕೆ ವಹಿಸಿಕೊಳ್ಳಲಿದ್ದಾರೆ. ನ. 14ರಿಂದ 2025 ಜ. 20ರ ವರೆಗೆ ಶಬರಿಮಲೆ ತೀರ್ಥಾಟನೆ ಕಾಲಾವಧಿಯಲ್ಲಿ ಸನ್ನಿದಾನ, ಪಂಪೆ, ನೀಲಕ್ಕಲ್ ಎಂಬೆಡೆಗಳಲ್ಲಿ ಭದ್ರತಾ ಕರ್ತವ್ಯಕ್ಕಾಗಿ ಉನ್ನತ ಪೊಲೀಸ್ ಅಧಿಕಾರಿಗಳನ್ನೇ ನೇಮಿಸಲು ಸರ್ಕಾರ ತೀರ್ಮಾನಿಸಿದೆ. ಈ ಹಿಂದೆ ಶಬರಿಮಲೆ ತೀರ್ಥಾಟನೆ ಕಾಲಾವಧಿಯಲ್ಲಿ ಉಂಟಾಗಿರುವ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಈ ಬಾರಿ ಸರ್ಕಾರ ಹೆಚ್ಚಿನ ನಿಗಾ ವಹಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಅ. 16ರಿಂದ 21ರ ವರೆಗೆ ನಡೆದ ತುಲಾಮಾಸದ ಉತ್ಸವ ಸಂದರ್ಭ ಸುಮಾರು ಮೂರು ಲಕ್ಷ ಭಕ್ತಾದಿಗಳು ದೇಗುಲ ಸಂದರ್ಶನ ನಡೆಸಿರುವುದಾಗಿ ದೇವಸ್ವಂ ಬೋರ್ಡ್ ತಿಳಿಸಿದೆ. ಈ ಕಾಲಾವಧಿಯಲ್ಲಿ 5.32ಕೋಟಿ ರೂ. ಕಾಣಿಕೆ ಸಂಗ್ರಹಗೊಂಡಿದೆ.