ಕಾಸರಗೋಡು: ಭಾಷಾ ವೈವಿಧ್ಯತೆ ಹೊಂದಿರುವ ಕಾಸರಗೋಡಿನಲ್ಲಿ 10ಕ್ಕೂ ಹೆಚ್ಚು ಪ್ರಧಾನ ಭಾಷೆಗಳಾಗಿದ್ದು, ಈ ಮೂಲಕ ಗಡಿನಾಡು ಭಾಷಾ ಬಾಂಧವ್ಯದ ತಾಣವಾಗಿ ಮೂಡಿಬಂದಿರುವುದಾಗಿ ಕನ್ನಡಪರ ಹೋರಾಟಗಾರ, ಕವಿ ರಾಧಾಕೃಷ್ಣ ಉಳಿಯತಡ್ಕ ತಿಳಿಸಿದರು. ಅವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಕನ್ನಡ ವಿಭಾಗ ಆಯೋಜಿಸಿದ್ದ 'ಚಂದ್ರಗಿರಿಯ ಮಾತು'ವಿದ್ಯಾರ್ಥಿ ವೇದಿಕೆಯ 2024-25 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾಸರಗೋಡು ಯಕ್ಷಗಾನಕ್ಕೂ ಮಹತ್ವದ ಕೊಡುಗೆ ನೀಡಿದ್ದು, ಸುಮಾರು ಮುನ್ನೂರು ಮಂದಿ ಯಕ್ಷಗಾನ ಪ್ರಸಂಗಕರ್ತರು ಕಾಸರಗೋಡು ಪ್ರದೇಶವೊಂದರಲ್ಲಿಯೇ ಇದ್ದು, ಯಕ್ಷಗಾನ ಪ್ರಸಂಗಗಳನ್ನು ರಚಿಸುವವರಿಗೆ ಕನ್ನಡ ಸಾಹಿತ್ಯದಲ್ಲಿ ಸೂಕ್ತ ಪ್ರಾತಿನಿಧ್ಯ ಲಭಿಸದಿರುವುದು ವಿಷಾದನೀಯ ಎಂದು ತಿಳಿಸಿದರು.
ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ. ಸೌಮ್ಯ ಎಚ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಸರಗೋಡಿನ ಕನ್ನಡ ಸಾಹಿತ್ಯ ಪರಂಪರೆ, ಯಕ್ಷಗಾನ ಪರಂಪರೆ, ಇಲ್ಲಿನ ಕನ್ನಡದ ಅಸ್ತಿತ್ವದ ಹೋರಾಟಗಳಿಗೆ ಕಾಸರಗೋಡಿನ ಸಾಹಿತಿಗಳ ಕೊಡುಗೆ ಅಪಾರವಾದುದು ಎಂದು ತಿಳಿಸಿದರು. ವಿದ್ಯಾರ್ಥಿ ವೇದಿಕೆಯ ಸಂಚಾಲಕ ಡಾ. ಪ್ರವೀಣ ಪದ್ಯಾಣ, ಡಾ. ಗೋವಿಂದರಾಜು ಕಲ್ಲೂರು, ಚೇತನ್ ಮುಂಡಾಜೆ, ವಿಭಾಗದ ಸಹಾಯಕ ಪ್ರಾಧ್ಯಾಪಕರುಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಮುಖ್ಯ ಅತಿಥಿಗಳ ಜೊತೆ ಸಂವಾದ ನಡೆಯಿತು. ವಿದ್ಯಾರ್ಥಿ ಕಾರ್ಯದರ್ಶಿ ದೀಪ ಸ್ವಾಗತಿಸಿದರು. ವಿನಯ್ ಎಂ ಕಾರ್ಯಕ್ರಮ ನಿರೂಪಿಸಿದರು. ರಕ್ಷಾ ವಂದಿಸಿದರು.