ಕಾಸರಗೋಡು: ತಿರುವನಂತಪುರ-ಮಂಗಳೂರು ವಂದೇಭಾರತ್ ಎಕ್ಸ್ ಫ್ರೆಸ್ ರೈಲು ಸಂಚಾರದ ಮಧ್ಯೆ ಪಯ್ಯನ್ನೂರು ನಿಲ್ದಾಣದಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ವಾಹನ ದಿಢೀರ್ ಹಳಿ ದಾಟಿ ಸಂಚರಿಸಿದ ಪರಿಣಾಮ ರೈಲನ್ನು ತುರ್ತು ಬ್ರೇಕ್ ಅದುಮುವ ಮೂಲಕ ನಿಲುಗಡೆಗೊಳಿಸಬೇಕಾಗಿ ಬಂದಿದ್ದು, ಲೋಕೋ ಪೈಲಟ್‍ನ ಸಕಾಲಿಕ ಕಾರ್ಯಾಚರಣೆಯಿಂದ ಭಾರೀ ದುರಂತವೊಂದು ತಪ್ಪಿದೆ.
ಮುಂಜಾಗ್ರತೆಯಿಲ್ಲದೆ ನಿರ್ಲಕ್ಷ್ಯದಿಂದ ಕಾಂಕ್ರೀಟ್ ಮಿಕ್ಸಿಂಗ್ ವಾಹನ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ವಾಹನ ಚಾಲಕ ಕಾಶೀನಾಥ್ ಎಂಬಾತನನ್ನು ಆರ್‍ಪಿಎಫ್ ಅಧಿಕಾರಿಗಳು ಬಂಧಿಸಿ, ವಾಹನ ವಶಕ್ಕೆ ತೆಗೆದುಕೊಂಡಿದ್ದಾರೆ. ಶನಿವಾರ ಮಧ್ಯಾಹ್ನ ಕಾಸರಗೋಡಿನಿಂದ ಹೊರಟಿದ್ದ ವಂದೇ ಭಾರತ್ ರೈಲು, ನಿಲ್ದಾಣ ಸನಿಹ ತಲುಪುತ್ತಿದ್ದಂತೆ ಏಕಾಏಕಿ ಕಾಂಕ್ರೀಟ್ ಮಿಕ್ಸಿಂಗ್ ವಾಹನವನ್ನು ಹಳಿ ದಾಟಿಸಲಾಗಿದೆ. ಅಪಘಾತ ಸಾಧ್ಯತೆ ಮನಗಂಡ ಲೋಕೋಪೈಲಟ್ ತುರ್ತು ಬ್ರೇಕ್ ಅದುಮುವ ಮೂಲಕ ರೈಲು ನಿಲುಗಡೆಗೊಳಿಸಿದ್ದಾರೆ.
ಅಮೃತ್ ಭಾರತ್ ಯೋಜನೆಯನ್ವಯ ಪಯ್ಯನ್ನೂರು ನಿಲ್ದಾಣದಲ್ಲಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರವನ್ನು ಒಂದು ಫ್ಲ್ಯಾಟ್‍ಫಾರ್ಮಿನಿಂದ ಇನ್ನೊಂದು ಕಡೆ ಕೊಂಡೊಯ್ಯಲಾಗುತ್ತಿತ್ತು. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ.