ನವದೆಹಲಿ: ಆಗ್ನೇಯ ದೆಹಲಿಯ ಕಾಲಿಂದಿ ಕುಂಜ್ ಪ್ರದೇಶದಲ್ಲಿರುವ ನರ್ಸಿಂಗ್ ಹೋಮ್‌ವೊಂದರಲ್ಲಿ ಗುರುವಾರ ವೈದ್ಯರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕೊಲೆ ಆರೋಪದಡಿ, ಪೊಲೀಸರು 16 ವರ್ಷದ ಬಾಲಕನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ರಾತ್ರಿ 1ರ ಸುಮಾರಿಗೆ, ಬಂಧಿತನಾಗಿರುವ ಬಾಲಕ ಪ್ರಾಥಮಿಕ ಚಿಕಿತ್ಸೆಗಾಗಿ ಈ ಪ್ರದೇಶದಲ್ಲಿರುವ ನಿಮಾ ಆಸ್ಪತ್ರೆಗೆ ಬಂದಿದ್ದಾನೆ. ಆತನೊಂದಿಗೆ ಮತ್ತೊಬ್ಬ ಬಾಲಕನೂ ಇದ್ದ. ಚಿಕಿತ್ಸೆ ಪಡೆದ ನಂತರ, ಯುನಾನಿ ವೈದ್ಯ ಜಾವೇದ್ ಅಖ್ತರ್ ಎಂಬುವವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ' ಎಂದು ಅಧಿಕಾರಿಗಳು ಹೇಳಿದ್ದಾರೆ.
ವೈದ್ಯನ ಹತ್ಯೆ ಮಾಡಿದ್ದಲ್ಲದೇ, ಸಾಮಾಜಿಕ ಜಾಲತಾಣದಲ್ಲಿ 'ಕೊನೆಗೂ 2024ರಲ್ಲಿ ಕೊಲೆ ಮಾಡಿದೆ' ಎಂಬುದಾಗಿ ಬಾಲಕ ತನ್ನ ಚಿತ್ರದೊಂದಿಗೆ ಬರೆದುಕೊಂಡಿದ್ದಾನೆ.
'ಅದೇ ಪ್ರದೇಶದಲ್ಲಿ ವಾಸಿಸುತ್ತಿರುವ ಇಬ್ಬರು ಬಾಲಕರು ಈ ಕೊಲೆ ಮಾಡಿದ್ದಾರೆ. ಇದು, ವೈದ್ಯನನ್ನು ಗುರಿಯಾಗಿಸಿ ಮಾಡಿರುವ ಕೃತ್ಯವಾಗಿದೆ' ಎಂದು ಜಂಟಿ ಪೊಲೀಸ್ ಕಮಿಷನರ್ (ದಕ್ಷಿಣ ವಲಯ) ಎಸ್.ಕೆ.ಜೈನ್ ಹೇಳಿದ್ದಾರೆ.
'ಬಾಲಕ ಗುಂಡು ಹೊಡೆದು ವೈದ್ಯನ ಹತ್ಯೆ ಮಾಡಿರುವ ದೃಶ್ಯಗಳು ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿ ಆಸ್ಪತ್ರೆಯ ನರ್ಸ್ ಹಾಗೂ ಆಕೆ ಪತಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮತ್ತೊಬ್ಬ ಆರೋಪಿ ಬಂಧನಕ್ಕೆ ಶೋಧ ನಡೆದಿದೆ' ಎಂದು ತಿಳಿಸಿದ್ದಾರೆ.