ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಚಟ್ಪಥ ಕಾಮಗಾರಿ ನಡೆಯುತ್ತಿರುವ ನುಳ್ಳಿಪ್ಪಾಡಿಯಲ್ಲಿ ಅಂಡರ್ ಪ್ಯಾಸೇಜ್ ನಿರ್ಮಿಸುವಂತೆ ಆಗ್ರಹಿಸಿ ಕ್ರಿಯಾಸಮಿತಿ ನಡೆಸಿಕೊಂಡು ಬರುತ್ತಿರುವ ಪ್ರತಿಭಟನೆ ಮತ್ತೆ ಚುರುಕುಗೊಂಡಿದೆ.
ನುಳ್ಳಿಪ್ಪಾಡಿಯಲ್ಲಿ ಕ್ರಿಯಾಸಮಿತಿ ವತಿಯಿಂದ ಮತ್ತೆ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದ್ದು, ಕಳೆದ ಒಂಬತ್ತು ತಿಂಗಳಿಂದ ಇದೇ ಬೇಡಿಕೆಯಿರಿಸಿ ನಡೆಸಿಕೊಂಡು ಬರುತ್ತಿರುವ ಹೋರಾಟ ಫಲಕಾಣದಿರುವುದರಿಂದ ಮತ್ತೆ ಹೋರಾಟ ಪ್ರಬಲಗೊಳಿಸಲು ಕ್ರಿಯಾ ಸಮಿತಿ ತೀರ್ಮಾನಿಸಿದೆ. ಹೊಸಬಸ್ ನಿಲ್ದಾಣದ ನಂತರ ಒಂದುವರೆ ಕಿ.ಮೀ ದೂರದ ಅಣಂಗೂರಿನಲ್ಲಿ ಅಂಡರ್‍ಪ್ಯಾಸೇಜ್ ವ್ಯವಸ್ಥೆಯಿದ್ದು, ನುಳ್ಳಿಪ್ಪಾಡಿಯಲ್ಲಿನ ಖಾಸಗಿ ಆಸ್ಪತ್ರೆ, ಚೆನ್ನಿಕ್ಕರದ ಸಾರ್ವಜನಿಕ ಸ್ಮಶಾನ, ವಿವಿಧ ಆರಾಧನಾಲಯಗಳಿಗೆ ತೆರಳಬೇಕಾದರೆ, ಎರಡು ಕಿ.ಮೀ ಸುತ್ತುಬಳಸಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಬಹುಜನರ ಬೇಡಿಕೆ ಈಡೇರಿಸಲು ಸಂಬಂಧಪಟ್ಟವರು ಮುಂದಾಗದಿರುವುದರಿಂದ ಅಹೋರಾತ್ರಿ ಧರಣಿಗೆ ಸಮಿತಿ ಮುಂದಾಗಿದೆ.
ಶಾಸಕ ಎನ್.ಎ ನೆಲ್ಲಿಕುನ್ನು ಪ್ರತಿಭಟನಾ ಪ್ರದೇಶಕ್ಕೆ ಆಗಮಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ನಗರಸಭೆ ಸದಸ್ಯರು ಹಾಗೂ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಪಿ ರಮೇಶ್. ಅನಿಲ್ ಚೆನ್ನಿಕರ, ಹ್ಯಾರಿಸ್ ನುಳ್ಳಿಪ್ಪಾಡಿ, ವರಪ್ರಸಾದ್ ಕೋಟೆಕಣಿ, ಎಂ.ಲಲಿತಾ, ಶಾರದ ಮೊದಲಾದವರು ನೇತೃತ್ವ ನಿಡಿದರು.