ಢಾಕಾ: ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗೆ ಕಾಲಮಿತಿ ನಿಗದಿಪಡಿಸಲು ಉಸ್ತುವಾರಿ ಸರ್ಕಾರದ ನಾಯಕ ಮೊಹಮ್ಮದ್ ಯೂನಸ್ ನಿರಾಕರಿಸಿದ್ದಾರೆ. 'ಚುನಾವಣೆಗೂ ಮೊದಲು ಕೆಲವು ಸುಧಾರಣಾ ಕಾರ್ಯಕ್ರಮಗಳು ಜಾರಿಗೊಳಿಸಬೇಕಿದೆ' ಎಂದು ಅವರು ತಿಳಿಸಿದ್ದಾರೆ.
ವಿದ್ಯಾರ್ಥಿ ಸಮುದಾಯ ನೇತೃತ್ವದ ಪ್ರತಿಭಟನೆಯಿಂದಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಪದಚ್ಯುತಗೊಂಡಿತ್ತು.
84 ವರ್ಷ ವಯಸ್ಸಿನ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರೂ ಆದ ಯೂನಸ್ ಅವರು, ಸದ್ಯ ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯನ್ನು ಮರುಸ್ಥಾಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 'ಈ ಕಾರ್ಯ ತುಂಬಾ ಕಠಿಣವಾದುದಾಗಿದೆ' ಎಂದೂ ಹೇಳಿಕೊಂಡಿದ್ದಾರೆ.
'ಉಸ್ತುವಾರಿ ಸರ್ಕಾರದಲ್ಲಿರುವ ಯಾರಿಗೂ ಸುದೀರ್ಘ ಕಾಲ ಈ ಕಾರ್ಯದಲ್ಲಿ ಉಳಿಯುವ ಗುರಿ ಇಲ್ಲ' ಎಂದು ಯೂನಸ್ ತಮ್ಮ ನೇತೃತ್ವದ ಉಸ್ತುವಾರಿ ಸರ್ಕಾರ ಕುರಿತು ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. 'ಪ್ರೊಥೊಮ್ ಅಲೊ' ದೈನಿಕದಲ್ಲಿ ಅವರ ಸಂದರ್ಶನ ಪ್ರಕಟವಾಗಿದೆ.
'ಸುಧಾರಣಾ ಕಾರ್ಯಕ್ರಮಗಳಿಗೆ ಪ್ರಥಮ ಆದ್ಯತೆ. ನೀವು ಚುನಾವಣೆ ನಡೆಸಿ ಎಂದು ಈಗ ಹೇಳಿದರೆ ನಾವು ಅದಕ್ಕೆ ಸಿದ್ಧರಿದ್ದೇವೆ. ಆದರೆ, ಮೊದಲು ಚುನಾವಣೆ ನಡೆಸುವುದು ತಪ್ಪಾಗುತ್ತದೆ' ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ 15 ವರ್ಷದ ಆಡಳಿತಾವಧಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ವ್ಯಾಪಕವಾಗಿತ್ತು ಎಂಬ ಆರೋಪವಿತ್ತು. ಅಲ್ಲದೆ, ಕಾನೂನುಬಾಹಿರವಾಗಿ ರಾಜಕೀಯ ವಿರೋಧಿಗಳ ಬಂಧನ, ಹತ್ಯೆ ಕೂಡಾ ನಡೆದಿರುವ ದೂರುಗಳಿದ್ದವು.
ಸರ್ಕಾರದ ರಾಜೀನಾಮೆಗೆ ಒತ್ತಾಯಿಸಿ, ವಿದ್ಯಾರ್ಥಿ ಸಮುದಾಯದ ನೇತೃತ್ವದಲ್ಲಿ ನಡೆಸಿದ್ದ ದೇಶವ್ಯಾಪಿ ಪ್ರತಿಭಟನೆಯಲ್ಲಿ 600ಕ್ಕೂ ಹೆಚ್ಚು ಜನರು ಮೃತಪಟ್ಟರು ಎಂದು ವಿಶ್ವಸಂಸ್ಥೆಯು ಈ ಕುರಿತ ಪ್ರಾಥಮಿಕ ವರದಿಯಲ್ಲಿಯೂ ಉಲ್ಲೇಖಿಸಿದೆ.
ಸಂವಿಧಾನದ ಪರಾಮರ್ಶೆ ಆಡಳಿತ ಸುಧಾರಣೆಗೆ ಕ್ರಮ: ಆಯೋಗ ರಚನೆ
ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಆಡಳಿತ ವ್ಯವಸ್ಥೆ ಸುಧಾರಣೆಗೆ ಒಂಭತ್ತು ಸದಸ್ಯರ ಸುಧಾರಣಾ ಆಯೋಗ ರಚಿಸಿದೆ. ಈ ಸಮಿತಿ ದೇಶದ ಸಂವಿಧಾನದ ಪರಾಮರ್ಶೆಯನ್ನು ನಡೆಸಿ ಸುಧಾರಣೆಗೆ ಅಗತ್ಯ ಸಲಹೆಗಳನ್ನು ನೀಡಲಿದೆ.
ಬಾಂಗ್ಲಾ ಮೂಲದ ಅಮೆರಿಕದ ಪ್ರೊಫೆಸರ್ ಅಲಿ ರಿಯಾಜ್ ನೇತೃತ್ವದಲ್ಲಿ ಆಯೋಗ ರಚನೆಯಾಗಿದೆ. 90 ದಿನದಲ್ಲಿ ವರದಿ ಸಲ್ಲಿಸಲು ಗಡುವು ನಿಗದಿಪಡಿಸಲಾಗಿದೆ ಎಂದು ಸರ್ಕಾರದ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಸಮಿತಿಯಲ್ಲಿ ಉಸ್ತುವಾರಿ ಸರ್ಕಾರದ ಮುಖ್ಯ ಸಲಹೆಗಾರರಾದ ಮೊಹಮ್ಮದ್ ಯೂನಸ್ ಅವರ ವಿಶೇಷ ಸಹಾಯಕರಾಗಿರುವ ವಿದ್ಯಾರ್ಥಿ ಪ್ರತಿನಿಧಿ ಮಹ್‌ಫುಜ್ ಅಲಂ ಅವರೂ ಇದ್ದಾರೆ.
ಢಾಕಾ ವಿ.ವಿ ಕಾನೂನು ವಿಭಾಗದ ಪ್ರೊಫೆಸರ್ ಸುಮೈಯಾ ಖೈರ್ ಮೊಹಮ್ಮದ್ ಇಕ್ರಮುಲ್ ಹಕ್ ವಕೀಲ ಇಮ್ರಾನ್ ಸಿದ್ದೀಕ್ ಸುಪ್ರೀಂ ಕೋರ್ಟ್ ವಕೀಲ ಡಾ.ಷರೀಫ್ ಭೂಯಿಯಾನ್ ಮಾನವ ಹಕ್ಕು ಕಾರ್ಯಕರ್ತ ಮೊಹಮ್ಮದ್ ಮುಸ್ತೈನ್ ಬಿಲ್ಲಾ ಲೇಖಕ ಫಿರೋಜ್ ಅಹ್ಮದ್ ಸದಸ್ಯರಾಗಿದ್ದಾರೆ.