ಚೆನ್ನೈ: ಹಲವು ಆರೋಪಗಳಿಗೆ ಸಂಬಂಧಿಸಿದಂತೆ ಸದ್ಗುರು ಜಗ್ಗಿ ವಾಸುದೇವ ಅವರ 'ಇಶಾ ಫೌಂಡೇಷನ್' ವಿರುದ್ಧ ತಮಿಳುನಾಡು ಪೊಲೀಸರು ಮಂಗಳವಾರ ವಿಚಾರಣೆ ಆರಂಭಿಸಿದ್ದಾರೆ.
ಏತನ್ಮಧ್ಯೆ ಆಧ್ಯಾತ್ಮಿಕತೆ ಹಾಗೂ ಯೋಗದ ಬಗ್ಗೆ ತಿಳಿಸಿಕೊಡಲು, ಸಾಧನೆ ಮಾಡಲು ಸದ್ಗುರು ಅವರು ಇಶಾ ಫೌಂಡೇಷನ್ ಸ್ಥಾಪಿಸಿದ್ದಾರೆಯೇ ಹೊರತು ಯಾರನ್ನೂ ತಪ್ಪು ದಾರಿಗೆ ಎಳೆಯುತ್ತಿಲ್ಲ ಎಂದು ಫೌಂಡೇಷನ್ ಪ್ರತಿಕ್ರಿಯೆ ನೀಡಿದೆ.
ಪೊಲೀಸರ ವಿಚಾರಣೆ ಬಗ್ಗೆ ಮಂಗಳವಾರ ರಾತ್ರಿಯೇ ಇಶಾ ಫೌಂಡೇಷನ್ ಈ ಪ್ರತಿಕ್ರಿಯೆ ಕೊಟ್ಟಿದೆ.
ಯಾರನ್ನು ನಾವು ಮದುವೆಯಾಗಿ ಅಥವಾ ಸನ್ಯಾಸಿಗಳಾಗಿ ಎಂದು ಹೇಳುವುದಿಲ್ಲ. ವಯಸ್ಕ ವ್ಯಕ್ತಿಗಳು ಅವರ ದಾರಿ ಕಂಡುಕೊಳ್ಳಲು ಸ್ವತಂತ್ರರು. ಈಗ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಆ ಇಬ್ಬರು ಹೆಣ್ಣು ಮಕ್ಕಳು ತಮ್ಮ ಇಚ್ಚೆಯಂತೆಯೇ ನಿರ್ಧಾರ ಕೈಗೊಂಡು (ಸನ್ಯಾಸಿನಿ) ಆಶ್ರಮದಲ್ಲಿದ್ದಾರೆ ಎಂದು ಹೇಳಿದೆ.
ಸತ್ಯ ಗೆಲ್ಲುತ್ತದೆ ಹಾಗೂ ಈಗ ಬಂದಿರುವ ಎಲ್ಲ ವಿವಾದಗಳಿಗೆ ಅಂತ್ಯವಿದೆ ಎಂದು ಇಶಾ ಫೌಂಡೇಷನ್ ಹೇಳಿದೆ.
ಈ ಸಂಸ್ಥೆಯ ವಿರುದ್ಧ ದಾಖಲಾಗಿರುವ ಎಲ್ಲ ಕ್ರಿಮಿನಲ್ ಪ್ರಕರಣಗಳ ಕುರಿತ ವಸ್ತುಸ್ಥಿತಿ ವರದಿಯನ್ನು ನೀಡಬೇಕು ಎಂದು ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿದ ಮಾರನೆಯ ದಿನವೇ ಫೌಂಡೇಷನ್ ವಿರುದ್ಧ ವಿಚಾರಣೆ ಆರಂಭಿಸಿದೆ.
ನಿವೃತ್ತ ಪ್ರಾಚಾರ್ಯ ಎಸ್. ಕಾಮರಾಜ್ ಅವರು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪೊಲೀಸರಿಗೆ ವಿಚಾರಣೆ ನಡೆಸುವಂತೆ ಸೂಚಿಸಿದೆ.
ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಆಶ್ರಮದಲ್ಲಿ ಹಿಡಿದಿಟ್ಟುಕೊಳ್ಳಲಾಗಿದೆ ಎಂದು ಕಾಮರಾಜ್ ಅವರು ದೂರಿದ್ದರು.
ಇಶಾ ಫೌಂಡೇಷನ್ ಜೊತೆ ಕೆಲಸ ಮಾಡುತ್ತಿರುವ ವೈದ್ಯರೊಬ್ಬರ ವಿರುದ್ಧ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಕಳೆದ ವಾರ ದಾಖಲಾಗಿರುವ ಪ್ರಕರಣವೊಂದರ ವಿವರಗಳನ್ನು ಕೂಡ ಪೊಲೀಸರು ಕೇಳಿದ್ದಾರೆ.