ಮುಂಬೈ: ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಬಾಬಾ ಸಿದ್ಧಿಕಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಇಲ್ಲಿನ ನ್ಯಾಯಾಲಯ ಅಕ್ಟೋಬರ್ 21ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

18 ವರ್ಷ ತುಂಬಿಲ್ಲದ ಕಾರಣ ತಾನು ಬಾಲಕ ಎಂದು ಹೇಳಿಕೊಂಡಿರುವ ಮತ್ತೊಬ್ಬನ ವಯಸ್ಸು ಪತ್ತೆ ಹಚ್ಚಲು, ಆತನ ಮೂಳೆ ಪರೀಕ್ಷೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದೆ.
ಪರೀಕ್ಷೆ ಬಳಿಕ ಮತ್ತೊಮ್ಮೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆಯೂ ನಿರ್ದೇಶಿಸಲಾಗಿದೆ. ಆತನ ವಿಚಾರಣೆಯನ್ನು ಸಾಮಾನ್ಯ ನ್ಯಾಯಾಲಯದಲ್ಲೇ ನಡೆಸಬೇಕೆ ಅಥವಾ ಬಾಲಾಪರಾಧಿ ನ್ಯಾಯ ಮಂಡಳಿಯಲ್ಲಿ (ಜೆಜೆಬಿ) ನಡೆಸಬೇಕೆ ಎಂಬದನ್ನು ಪರೀಕ್ಷೆ ಬಳಿಕ ನಿರ್ಧರಿಸಲಾಗುವುದು ಎಂದು ಹೇಳಿದೆ.
ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ತಮ್ಮ ಪುತ್ರ ಹಾಗೂ ಶಾಸಕ ಜೀಶನ್ ಅವರ ಕಚೇರಿಯಿಂದ ಶನಿವಾರ ರಾತ್ರಿ ಹೊರಗೆ ಬಂದಾಗ ಸಿದ್ಧಿಕಿ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಕೂಡಲೇ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದರು.
ಪ್ರಕರಣ ಸಂಬಂಧ ಹರಿಯಾಣದ ಗುರ್ಮೈಲ್ ಬಲ್ಜಿತ್ ಸಿಂಗ್ (23) ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಎಂಬ ಇಬ್ಬರನ್ನು ಬಂಧಿಸಲಾಗಿದ್ದು, ಅವರನ್ನು ಮುಂಬೈ ಪೊಲೀಸರು ಇಂದು (ಭಾನುವಾರ) ಮಧ್ಯಾಹ್ನ ನ್ಯಾಯಾಲಯದೆದುರು ಹಾಜರುಪಡಿಸಿದರು. ಮತ್ತೊಬ್ಬ ಆರೋಪಿ ಶಿವ ಗೌತಮ್ ಎಂಬಾತ ತಲೆಮರೆಸಿಕೊಂಡಿದ್ದಾನೆ.