ನವದೆಹಲಿ: ಉತ್ತರ ಪ್ರದೇಶದ ವಿಧಾನಸಭಾ ಉಪಚುನಾವಣೆಗೆ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ, ಎಲ್ಲ ಒಂಬತ್ತು ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಚಿಹ್ನೆಯಡಿ ಕಣಕ್ಕಿಳಿದಿರುವ 'ಇಂಡಿಯಾ' ಒಕ್ಕೂಟದ ಅಭ್ಯರ್ಥಿಗಳನ್ನು ಬೇಷರತ್ತಾಗಿ ಬೆಂಬಲಿಸುವುದಾಗಿ ಕಾಂಗ್ರೆಸ್ ಗುರುವಾರ ಘೋಷಿಸಿದೆ.
'ಬಿಜೆಪಿಯವರು ಸಂವಿಧಾನಕ್ಕೆ ಬೆದರಿಕೆ ಒಡ್ಡುತ್ತಿರುವಾಗ, ಸೀಟುಗಳನ್ನು ಪಡೆಯುವುದು ಮುಖ್ಯವಲ್ಲ, ಗೆಲುವೇ ಮುಖ್ಯವಾಗಿದೆ' ಎಂದು ಅದು ಹೇಳಿದೆ.
ಪಕ್ಷದ ಕೇಂದ್ರ ಮತ್ತು ರಾಜ್ಯ ನಾಯಕರ ಜತೆಗೆ ಚರ್ಚೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶದ ಉಸ್ತುವಾರಿ ಅವಿನಾಶ್ ಪಾಂಡೆ ಅವರು ಕಾಂಗ್ರೆಸ್‌ನ ಉತ್ತರಪ್ರದೇಶ ಘಟಕದ ಅಧ್ಯಕ್ಷ ಅಜಯ್ ರೈ ಅವರ ಸಮ್ಮುಖದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
'ಇಂಡಿಯಾ' ಒಕ್ಕೂಟದ ಅಭ್ಯರ್ಥಿಗಳು ತಮ್ಮ ಪಕ್ಷದ ಚುನಾವಣಾ ಚಿಹ್ನೆ 'ಸೈಕಲ್'ನಡಿ ರಾಜ್ಯದ ಎಲ್ಲ ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಬುಧವಾರ ಹೇಳಿದ್ದರು.
ಉಪಚುನಾವಣೆಯಲ್ಲಿ ಒಂಬತ್ತು ಸ್ಥಾನಗಳಲ್ಲಿ ಕನಿಷ್ಠ ಮೂರು ಸ್ಥಾನಗಳಿಗಾಗಿ ಎಸ್‌ಪಿಯೊಂದಿಗೆ ಕಾಂಗ್ರೆಸ್ ತೀವ್ರ ಚೌಕಾಶಿ ನಡೆಸುತ್ತಿತ್ತು. ಆದರೆ, ನಂತರದಲ್ಲಿ ಖೈರ್ ಮತ್ತು ಗಾಜಿಯಾಬಾದ್ ಈ ಎರಡು ಸ್ಥಾನಗಳಿಗೆ ಒಪ್ಪಿಕೊಂಡಿತ್ತು. ಕಾಂಗ್ರೆಸ್ ಕೇಳಿದ್ದ ಫುಲ್ಪುರ್ ಮತ್ತು ಮಂಜಾವದಂತಹ ಸ್ಥಾನಗಳನ್ನು ಬಿಟ್ಟುಕೊಡಲು ಎಸ್‌ಪಿ ಒಪ್ಪಲಿಲ್ಲ. ಕೊನೆಗೆ, ಗೆಲ್ಲಲು ಸಾಧ್ಯವಾಗದಿರುವ ಖೈರ್ ಮತ್ತು ಗಾಜಿಯಾಬಾದ್ ಸ್ಥಾನಗಳಿಂದಲೂ ಕಾಂಗ್ರೆಸ್ ಹಿಂದೆಸರಿದಿದೆ.
'ಬಿಜೆಪಿಯು ಸಂವಿಧಾನ ಮತ್ತು ಭ್ರಾತೃತ್ವಕ್ಕೆ ಬೆದರಿಕೆ ಒಡ್ಡುತ್ತಿದೆ. ಹೆಚ್ಚುತ್ತಿರುವ ರಾಜಕೀಯ ಮತ್ತು ಸಾಮಾಜಿಕ ಉದ್ವಿಗ್ನತೆಯ ನಡುವೆ ಇಂಡಿಯಾ ಒಕ್ಕೂಟ ಬಲಪಡಿಸಲು, ಉತ್ತರಪ್ರದೇಶದಲ್ಲಿ ಉಪಚುನಾವಣೆಗಳಿಗೆ ಕಾಂಗ್ರೆಸ್‌ನಿಂದ ಅಭ್ಯರ್ಥಿಗಳನ್ನು ನಿಲ್ಲಿಸದಿರಲು ನಿರ್ಧರಿಸಿದ್ದೇವೆ. 'ಇಂಡಿಯಾ'ದ ಅಭ್ಯರ್ಥಿಗಳ ಗೆಲುವಿಗೆ ನಾವು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ' ಎಂದು ಅವಿನಾಶ್ ಪಾಂಡೆ ಹೇಳಿದರು.
ಎಸ್‌ಪಿ ಮುಂದೆ ಕಾಂಗ್ರೆಸ್ ಶರಣಾಗುತ್ತಿದೆಯೇ ಎಂಬ ಪ್ರಶ್ನೆಗೆ, 'ಇದು ಪಕ್ಷ ಸಂಘಟನೆಯ ಬಗ್ಗೆ ಯೋಚಿಸುವ ಸಮಯವಲ್ಲ. ಆದರೆ ಸಂವಿಧಾನ ಉಳಿಸಲು ಮತ್ತು ಶಾಂತಿ ಕದಡದಂತೆ ನೋಡಿಕೊಳ್ಳಲು ಒಗ್ಗಟ್ಟಿನಿಂದ ಹೋರಾಡುವ ಸಮಯವಿದು. ನಮ್ಮದು ರಾಷ್ಟ್ರೀಯ ಪಕ್ಷ ಮತ್ತು ನಮಗೆ ಕೆಲವು ಜವಾಬ್ದಾರಿಗಳಿವೆ' ಎಂದು ಪಾಂಡೆ ಹೇಳಿದರು.