ಬೀಜಿಂಗ್: ಪೂರ್ವ ಲಡಾಖ್‌ನಲ್ಲಿ ಭಾರತ ಹಾಗೂ ಚೀನಾ ನಿಯೋಜಿಸಿರುವ ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯು 'ಸುಗಮವಾಗಿ' ಸಾಗಿದೆ ಎಂದು ಚೀನಾ ಹೇಳಿದೆ.
ಉಭಯ ದೇಶಗಳ ನಡುವಣ ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ನಡೆದಿರುವ ಒಪ್ಪಂದದ ಅನುಸಾರ ಸೇನೆ ಹಿಂತೆಗೆತ ಪ್ರಕ್ರಿಯೆ ನಡೆಯುತ್ತಿದೆ.
'ಗಡಿ ಪ್ರದೇಶದಲ್ಲಿನ ಕಳವಳಕ್ಕೆ ಸಂಬಂಧಿಸಿದಂತೆ ಚೀನಾ ಹಾಗೂ ಭಾರತ ಮಾಡಿಕೊಂಡಿರುವ ಒಪ್ಪಂದದಂತೆ, ಸಂಬಂಧಿತ ಕೆಲಸಗಳಲ್ಲಿ ಎರಡೂ ದೇಶಗಳ ಪಡೆಗಳು ತೊಡಗಿಕೊಂಡಿವೆ. ಪ್ರಕ್ರಿಯೆಯು ಸುಗಮವಾಗಿ ನಡೆಯುತ್ತಿದೆ' ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ತಿಳಿಸಿದ್ದಾರೆ.
ರಷ್ಯಾದ ಕಜಾನ್‌ನಲ್ಲಿ ಇತ್ತೀಚೆಗೆ ನಡೆದ 'ಬ್ರಿಕ್ಸ್' ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್ ಅವರು ಅಕ್ಟೋಬರ್ 23ರಂದು ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಈ ವೇಳೆ ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಸೇನೆಯ ಹಿಂತೆಗೆತ ಮತ್ತು ಗಸ್ತು ತಿರುಗುವಿಕೆ ಸಂಬಂಧಿಸಿದಂತೆ ಒಪ್ಪಂದವನ್ನು ಅನುಮೋದಿಸಿದ್ದರು.
ಪೂರ್ವ ಲಡಾಖ್‌ನ ಎಲ್‌ಎಸಿ ಬಳಿ ಇನ್ನೂ ಸಂಘರ್ಷ ಇರುವ ಸ್ಥಳಗಳಲ್ಲಿ ಗಸ್ತು ತಿರುಗಲು ಚೀನಾ ಜತೆಗೆ ಒಪ್ಪಂದಕ್ಕೆ ಬಂದಿರುವುದಾಗಿ ಭಾರತ ಅಕ್ಟೋಬರ್ 21ರಂದು ಪ್ರಕಟಿಸಿತ್ತು.
ಒಪ್ಪಂದದಂತೆ ಎರಡೂ ದೇಶಗಳು, ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಲ್ಲಿ ನಿಯೋಜಿಸಿರುವ ಸೇನೆಗಳನ್ನು ವಾಪಸ್ ಕರೆಸಿಕೊಳ್ಳುತ್ತಿವೆ. ಇದು ಅಕ್ಟೋಬರ್ 28-29ರ ಒಳಗೆ ಅಂತ್ಯಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಸೇನೆ ಶುಕ್ರವಾರ ಹೇಳಿದೆ.
ಈ ಬೆಳವಣಿಗೆಯನ್ನು, ಭಾರತ ಹಾಗೂ ಚೀನಾ ನಡುವೆ 4 ವರ್ಷಗಳಿಂದ ಮೂಡಿರುವ ಅನಿಶ್ಚಿತ ಪರಿಸ್ಥಿತಿಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದು ವಿಶ್ಲೇಷಿಸಲಾಗಿದೆ.