ತಿರುವನಂತಪುರ: ಮಾಜಿ ಡಿಜಿಪಿ ಆರ್.ಶ್ರೀಲೇಖಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ತಿರುವನಂತಪುರದ ಈಶ್ವರವಿಲಾಸಂ ರಸ್ತೆಯಲ್ಲಿರುವ ಶ್ರೀಲೇಖಾ ಅವರ ಮನೆಗೆ ಸಂಜೆ 4 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಭೇಟಿ ನೀಡಿ ಸದಸ್ಯತ್ವ ನೀಡಿದರು.
ಶ್ರೀಲೇಖಾ ಕೇರಳ ಕೇಡರ್‍ನ ಮೊದಲ ಮಹಿಳಾ ಐಪಿಎಸ್ ಅಧಿಕಾರಿ. ಬಿಜೆಪಿ ಮುಖಂಡ ವಿ.ವಿ. ರಾಜೇಶ್ ಸೇರಿದಂತೆ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೆ.ಶ್ರೀಲೇಖಾ ಅವರು ಪೋಲೀಸ್ ಇಲಾಖೆಯಲ್ಲಿ ಸುಧಾರಣೆಗಳ ನೇತೃತ್ವ ವಹಿಸಿದ ಮಹಿಳಾ ಅಧಿಕಾರಿ. ಅವರು ಮಲೆಯಾಳಂ-ಆಂಗ್ಲ ಭಾಷೆಗಳ ಪ್ರಸಿದ್ಧ ಬರಹಗಾರ್ತಿಯೂ ಹೌದು. ನವರಾತ್ರಿ ಸಂದರ್ಭದಲ್ಲಿ ಶ್ರೀಲೇಖಾ ಅವರಿಗೆ ಸದಸ್ಯತ್ವ ನೀಡಲು ಸಾಧ್ಯವಾಗಿರುವುದು ಸಂತಸ ತಂದಿದೆ ಎಂದು ಸುರೇಂದ್ರನ್ ಹೇಳಿದ್ದಾರೆ. ಪಕ್ಷಕ್ಕೆ ಎಲ್ಲ ವರ್ಗದ ಜನ ಬರುತ್ತಾರೆ ಎಂದರು.
ನಾನು ಸೇವೆಯಲ್ಲಿದ್ದಾಗ ನಿಷ್ಪಕ್ಷಪಾತ ಅಧಿಕಾರಿಯಾಗಿದ್ದೆ. ಯಾವುದೇ ಪಕ್ಷಕ್ಕೆ ಸೇರಿರಲಿಲ್ಲ. ನಿವೃತ್ತಿಯ ನಂತರ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೋದಿ ಎಫೆಕ್ಟ್ ನನ್ನನ್ನು ಬಿಜೆಪಿಗೆ ಕರೆತಂದಿದೆ ಎಂದು ಸದಸ್ಯತ್ವ ಸ್ವೀಕರಿಸಿದ ಬಳಿಕ ಶ್ರೀಲೇಖಾ ಹೇಳಿದರು. ಈಗ ಹಲವು ವಿಷಯಗಳನ್ನು ನೋಡುತ್ತಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ಬಂದಿದ್ದೇನೆ. ಬಿಜೆಪಿಯ ಆದರ್ಶಗಳನ್ನು ನಂಬಿರುವುದರಿಂದ ಬಿಜೆಪಿಯೊಂದಿಗೆ ನಿಂತಿದ್ದೇನೆ ಎಂದುಶ್ರೀಲೇಖ ಪ್ರತಿಕ್ರಿಯಿಸಿರುವರು.
ಎರಡು ವರ್ಷಗಳ ಹಿಂದೆ ಅವರು ಸೇವೆಯಿಂದ ನಿವೃತ್ತರಾಗಿದ್ದರು. ಸೇವಾನಿರತರಾಗಿದ್ದಾಗ ಅವರು ಸರ್ಕಾರದ ಜತೆ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. ಆದ್ದರಿಂದ, ಸೇವೆಯಿಂದ ನಿವೃತ್ತಿಯಾಗುವ ಸಮಯದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಸಹ ಸ್ವೀಕರಿಸಲಿಲ್ಲ. ಬಳಿಕ ತಮ್ಮದೇ ವ್ಲಾಗ್ ಮೂಲಕ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ದೊಡ್ಡ ವಿವಾದವಾಗಿತ್ತು.