ಕೊಚ್ಚಿ: ನಿರ್ಮಾಣ ಕ್ಷೇತ್ರವನ್ನು ಆಧುನೀಕರಿಸಲು, ಹೊಸ ತಂತ್ರಜ್ಞಾನಗಳಿಗಾಗಿ ನಿರಂತರವಾಗಿ ಸಂಶೋಧನೆ ನಡೆಯಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಅವರು ಆನ್‍ಲೈನ್‍ನಲ್ಲಿ ಕೊಚ್ಚಿಯ ದಿ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸಿವಿಲ್ ಎಂಜಿನಿಯರ್‍ಗಳು ವಿವಿಧ ಆವಿಷ್ಕಾರಗಳ ಮೂಲಕ ನಿರ್ಮಾಣ ಕ್ಷೇತ್ರವನ್ನು ಆಧುನೀಕರಿಸಿದ್ದರಿಂದ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.
ದೇಶದಲ್ಲಿ ಪ್ರತಿದಿನ ಟನ್‍ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಹೊಸ ಆವಿಷ್ಕಾರಗಳ ಮೂಲಕ ಅವುಗಳನ್ನು ರಸ್ತೆ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಇದರಿಂದ ಕೋಟ್ಯಂತರ ರೂಪಾಯಿ ಉಳಿತಾಯವಾಗುತ್ತಿದೆ. ಸಾರಿಗೆ ಕ್ಷೇತ್ರದಲ್ಲೂ ಪ್ರಮುಖ ಬದಲಾವಣೆಗಳಾಗಿವೆ. ಸಿಎನ್‍ಜಿ ವಾಹನಗಳು ಹೇರಳವಾಗಿ ರಸ್ತೆಗಿಳಿಯುತ್ತಿವೆ. ಇದರಿಂದ ಹಣ ಉಳಿತಾಯವಾಗುತ್ತದೆ ಮತ್ತು ವಾಯು ಮಾಲಿನ್ಯ ಕಡಿಮೆಯಾಗುತ್ತದೆ.
ಉತ್ತಮ ವಿನ್ಯಾಸ ಮತ್ತು ಗುಣಮಟ್ಟವು ಯಾವುದೇ ನಿರ್ಮಾಣ ಕಾರ್ಯಕ್ಕೆ ಒಂದು ಆಸ್ತಿಯಾಗಿದ್ದು, ರೈಲ್ವೇ ಮತ್ತು ರಸ್ತೆಗಳಂತಹ ಎಲ್ಲಾ ಕ್ಷೇತ್ರಗಳಲ್ಲಿ ಚರ್ಚೆಗಳ ಮೂಲಕ ಬದಲಾವಣೆಗಳನ್ನು ಮಾಡಬಹುದು. ಇಂದು ದೇಶ ಮೂರನೇ ಆರ್ಥಿಕ ಶಕ್ತಿಯಾಗಿ ಮುನ್ನಡೆಯುತ್ತಿದೆ. ಇದರಲ್ಲಿ ಸಿವಿಲ್ ಇಂಜಿನಿಯರ್ ಗಳು ಉತ್ತಮ ಪಾತ್ರ ವಹಿಸುತ್ತಿದ್ದು, ದೇಶವನ್ನು ಮರುಸೃಷ್ಟಿಸುವ ವಿಶ್ವಕರ್ಮಿಗಳಾಗಿದ್ದಾರೆ ಎಂದರು.
ಐಇ ಅಧ್ಯಕ್ಷ ಡಾ.ಜಿ. ರಂಗನಾಥನ್ ಅಧ್ಯಕ್ಷತೆ ವಹಿಸಿದ್ದರು. ಎಐಸಿಟಿಇ ಅಧ್ಯಕ್ಷ ಪ್ರೊ. ಡಾ. ಟಿಜಿ ಸೀತಾರಾಂ ಮುಖ್ಯ ಅತಿಥಿಗಳಾಗಿದ್ದರು. ಐಎಸಿವಿಡಿಬಿ ಅಧ್ಯಕ್ಷ ಡಾ. ಅನಿಲ್ ಜೋಸೆಫ್, ಕೊಚ್ಚಿ ಸ್ಥಳೀಯ ಕೇಂದ್ರದ ಅಧ್ಯಕ್ಷ ಜಿ. ವೇಲಾಯುಧನ್ ನಾಯರ್, ರಾಷ್ಟ್ರೀಯ ಸಮಾವೇಶದ ಸಂಚಾಲಕ ಕೆ.ಎಸ್. ಬಾಬು, ಐಇ ನಿಯೋಜಿತ ಅಧ್ಯಕ್ಷ ವಿ.ಬಿ. ಸಿಂಗ್, ಕೊಚ್ಚಿ ಸ್ಥಳೀಯ ಕೇಂದ್ರದ ಗೌರವ ಕಾರ್ಯದರ್ಶಿ ಟಿ.ಸಿ. ಪ್ರಶಾಂತ್, ಡಾ. ಸಂಜಯ್ ಪಂತ್, ಇ.ಎ. ಅಬ್ದು ಮಾತನಾಡಿದರು. ಉದ್ಘಾಟನಾ ಸಮಾರಂಭದಲ್ಲಿ ಅತ್ಯುತ್ತಮ ಇಂಜಿನಿಯರ್ ಪ್ರಶಸ್ತಿ ಹಾಗೂ ಉತ್ತಮ ಯುವ ಎಂಜಿನಿಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.