ನವದೆಹಲಿ: ಕೆನಡಾ ಅನುಸರಿಸುತ್ತಿರುವ ನೀತಿಯನ್ನು 'ದ್ವಿಮುಖ ನೀತಿ' ಎಂದು ಹೇಳಿದರೂ ಅದು ಸೌಮ್ಯ ಪದ ಬಳಕೆಯಾಗುತ್ತದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ರಾಜತಾಂತ್ರಿಕ ಗದ್ದಲದ ನಡುವೆ ಕೆನಡಾಗೆ ತಪರಾಕಿ ನೀಡಿದ್ದಾರೆ.
ಕಳೆದ ವರ್ಷ ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಡುತ್ತಲೇ ಇವೆ.
ಕೆನಡಾ ಇತರ ರಾಜತಾಂತ್ರಿಕರನ್ನು ಹೇಗೆ ಪರಿಗಣಿಸುತ್ತದೆ ಮತ್ತು ಭಾರತದಲ್ಲಿದ್ದಾಗ ಅವರ ರಾಜತಾಂತ್ರಿಕರು ಬಳಸಲು ಪ್ರಯತ್ನಿಸುವ "ಪರವಾನಗಿ" ಯನ್ನು ಹೇಗೆ ಪರಿಗಣಿಸುತ್ತದೆ ಎಂಬುದನ್ನು ವಿವರಿಸುವಾಗ "ದ್ವಿಮುಖ ನೀತಿ ಎಂದು ಹೇಳುವುದು ಇದಕ್ಕೆ ತುಂಬಾ ಸೌಮ್ಯವಾದ ಪದವಾಗಿದೆ" ಎಂದು ಜೈಶಂಕರ್ ಹೇಳಿದ್ದಾರೆ.
NDTV ವಿಶ್ವ ಶೃಂಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಜೈಶಂಕರ್, "ಆದ್ದರಿಂದ ಸ್ಪಷ್ಟವಾಗಿ, ಅವರು ತಮ್ಮನ್ನು ತಾವು ನೀಡುವ ಸಮರ್ಥನೆ ಕೆನಡಾದಲ್ಲಿ ರಾಜತಾಂತ್ರಿಕರ ಮೇಲೆ ಅವರು ವಿಧಿಸುವ ರೀತಿಯ ನಿರ್ಬಂಧಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಭಾರತದ ನಾಯಕರಿಗೆ, ಭಾರತದ ರಾಜತಾಂತ್ರಿಕರಿಗೆ ಬಹಿರಂಗವಾಗಿ ಬೆದರಿಕೆ ಹಾಕುವ ಜನರಿದ್ದಾರೆ ಎಂದು ನಾವು ಅವರಿಗೆ ಹೇಳಿದಾಗ, ಅವರ ಉತ್ತರ ವಾಕ್ ಸ್ವಾತಂತ್ರ್ಯ ಎಂಬುದಾಗಿರುತ್ತದೆ" ಎಂದು ಹೇಳಿದ್ದಾರೆ.
"ಅವರು ಭಾರತೀಯ ಹೈಕಮಿಷನರ್‌ಗೆ ಬೆದರಿಕೆ ಹಾಕಿದರೆ, ಅವರು ಅದನ್ನು ವಾಕ್ ಸ್ವಾತಂತ್ರ್ಯ ಎಂದು ಒಪ್ಪಿಕೊಳ್ಳಬೇಕು, ಆದರೆ ಕೆನಡಾದ ಹೈಕಮಿಷನರ್ ಸೌತ್ ಬ್ಲಾಕ್‌ನಿಂದ ಹೊರನಡೆದರು ಎಂದು ಭಾರತೀಯ ಪತ್ರಕರ್ತ ಹೇಳಿದರೆ, ಅದು ವಿದೇಶಿ ಹಸ್ತಕ್ಷೇಪ" ಎಂದು ಜೈಶಂಕರ್ ಹೇಳಿರುವುದನ್ನು ಎಎನ್ ಐ ಉಲ್ಲೇಖಿಸಿದೆ.
ಕೆನಡಾ- ಭಾರತ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿರುವ ಪರಿಣಾಮ ಭಾರತವು ತನ್ನ ಹೈಕಮಿಷನರ್ ಮತ್ತು ಐವರು ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡಿದೆ, ಅವರು ಭಾರತಕ್ಕೆ ಹಿಂತಿರುಗುತ್ತಿದ್ದಾರೆ. ಭಾರತೀಯ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಲಾಗಿದೆ ಎಂದು ಕೆನಡಾ ಸರ್ಕಾರ ಹೇಳಿತ್ತು.