ತಿರುವನಂತಪುರಂ: ಸೂಪರ್ಸ್ಟಾರ್ ರಜಿನಿಕಾಂತ್ ಅಭಿನಯದ ಜೈಲರ್ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಯಿತು. ಈ ಸಿನಿಮಾದ ಪ್ರತಿಯೊಂದು ಪಾತ್ರವು ಕೂಡ ವೀಕ್ಷಕರ ಮೆಚ್ಚುಗೆ ಪಡೆಯಿತು. ಅದರಲ್ಲೂ ಖಳನಾಯಕ ವಿನಾಯಕನ್ ವಿಭಿನ್ನ ಮ್ಯಾನರಿಸಂ ಮೂಲಕ ಅಬ್ಬರಿಸಿ ಬೊಬ್ಬಿರಿದರು.
ಈ ವಿನಾಯಕನ್ ನಟನೆಗಿಂತ ವಿವಾದದಿಂದಲೇ ಸುದ್ದಿಯಾಗಿದ್ದು ಹೆಚ್ಚು. ಹಿಂದೊಮ್ಮೆ ನಾನು 10 ಮಹಿಳೆಯರ ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ ಎನ್ನುವ ಮೂಲಕ ವಿವಾದ ಹುಟ್ಟುಹಾಕಿದ್ದರು. ಅಲ್ಲದೆ, ಪೊಲೀಸ್ ಠಾಣೆಯಲ್ಲಿ ಅಸಭ್ಯ ವರ್ತನೆ ತೋರಿ ಚರ್ಚೆಗೆ ಗ್ರಾಸವಾಗಿದ್ದರು. ಮಾಡೆಲ್ ಮತ್ತು ಆಕೆಯ ತಾಯಿಯನ್ನು ಮಂಚಕ್ಕೆ ಕರೆದಿದ್ದಾಗಿ ಒಪ್ಪಿಕೊಂಡು ಸುದ್ದಿಯಾಗಿದ್ದರು. ಹೀಗೆ ಸಿನಿಮಾಗಿಂತ ಬೇಡದ ವಿಚಾರಕ್ಕೆ ವಿನಾಯಕನ್ ಹೆಚ್ಚು ಸುದ್ದಿಯಾಗಿದ್ದಾರೆ.
ತಾಜಾ ಸಂಗತಿ ಏನೆಂದರೆ, ತಮ್ಮ ಹೊಸ ಸಿನಿಮಾದ ಪ್ರಚಾರ ಹಿನ್ನೆಲೆಯಲ್ಲಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ವಿನಾಯಕನ್ ಅವರು ಕೇರಳ ಯುವತಿಯರ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದು, ವಿವಾದದ ಸ್ವರೂಪ ಪಡೆದುಕೊಂಡಿದೆ. ಕೇರಳದ ಯುವತಿಯರು ಓದಿಗಾಗಿ ಅಲ್ಲ ಸ್ವಾತಂತ್ರ್ಯಕ್ಕಾಗಿ ರಾಜ್ಯವನ್ನು ತೊರೆಯುತ್ತಾರೆ ಎಂದಿದ್ದಾರೆ.
ನಮ್ಮಲ್ಲಿ ಮಧ್ಯರಾತ್ರಿ ನಡೆದಾಡಲು ಆಗುತ್ತಾ? ಆಗ ಅನೇಕ ಸಜ್ಜನರು ಹದ್ದುಗಳಂತೆ ಸುತ್ತುವರಿಯುತ್ತಾರೆ. ಮಧ್ಯರಾತ್ರಿ 12 ಗಂಟೆಗೆ ಆ ಟ್ರೆಸ್ಟಲ್ ಸೇತುವೆಯ ಮೇಲೆ ಕುಳಿತು ಆನಂದಿಸಲು ಸಾಧ್ಯವೇ? ಇಲ್ಲವೇ ಇಲ್ಲ. ಇಲ್ಲಿ ಅನೇಕ ನಾಯಕರು, ಸಮಾಜ ಸೇವಕರು ಹಾಗೂ ಸಾಂಸ್ಕೃತಿಕ ನಾಯಕರು ಇದಾರೆ. ಹಾಗಾದರೆ ಅಸಲಿ ವಿಚಾರ ಏನು? ನಟಿಯರನ್ನೂ ಒಳಗೊಂಡಂತೆ ಮಹಿಳೆಯರು ವಿದೇಶಕ್ಕೆ ಹೋದಾಗ ಸಮುದ್ರತೀರದಲ್ಲಿ ಬಿಕಿನಿಯನ್ನು ಧರಿಸುತ್ತಾರೆ. ಆದರೆ, ಕೇರಳದ ವರ್ಕಲಾ ಅಥವಾ ಬೇರೆಡೆ ಇದು ಸಾಧ್ಯವೇ? ಆದರೆ ಮೈಮಿ ಸೇರಿದಂತೆ ಇತರೆ ವಿದೇಶಿ ತಾಣಗಳಲ್ಲಿ ಇದು ಸಾಧ್ಯವಿದೆ. ಕೇರಳದಲ್ಲಿ ಏಕೆ ಈ ರೀತಿ ಆಗುತ್ತಿಲ್ಲ? ಎಂದು ವಿನಾಯಕನ್ ಪ್ರಶ್ನೆ ಮಾಡಿದ್ದಾರೆ.
ಕೇರಳ ಸಮಾಜ ಅಷ್ಟೊಂದು ಮುಂದುವರಿದಿಲ್ಲ. ಇದು ಕೇವಲ ಬಡ ಸಮಾಜ. ಇಲ್ಲಿ ಕೆಲವು ಸಜ್ಜನರು ಬಂದು ನಿಮ್ಮನ್ನು ಪ್ರಶ್ನೆ ಮಾಡಿ, ಹಿಂಸೆ ನೀಡುತ್ತಾರೆ. ಹೀಗಾಗಿ ಕೇರಳದ ಯುವತಿಯರು ಸ್ವಾತಂತ್ರ್ಯಕ್ಕಾಗಿ ದೇಶವನ್ನು ತೊರೆಯುತ್ತಿದ್ದಾರೆ. ನಾನು ಸ್ತ್ರೀವಾದಿ ವಿರೋಧಿಯಲ್ಲ. ನನ್ನ ಜೊತೆಗಿದ್ದ ಯಾವ ಹೆಣ್ಣೂ ನನ್ನನ್ನು ಬಿಟ್ಟು ಹೋಗಿಲ್ಲ ಎಂದು ವಿನಾಯಕನ್ ಹೇಳಿದ್ದು, ಇದೀಗ ಅವರ ಮಾತು ಕೇರಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅಂದಹಾಗೆ ವಿನಾಯಕನ್ ತಮಿಳಿನಲ್ಲಿ 'ತಿಮಿರು', 'ಸಿರುತೈ', 'ಮರಿಯಾನ್' ಮುಂತಾದ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ತಮ್ಮ ತವರು ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ.