ವಯನಾಡ್: ವಯನಾಡ್ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಬುಧವಾರ ಚುನಾವಣಾ ರಾಜಕಾರಣಕ್ಕೆ ಚೊಚ್ಚಲ ಪ್ರವೇಶ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಮ್ಮ ಬಳಿ ಇರುವ ಆಸ್ತಿಯ ಮೌಲ್ಯವನ್ನು ಘೋಷಿಸಿದ್ದಾರೆ.
ಪ್ರಿಯಾಂಕ ವಾಧ್ರ ಬಳಿ ಒಟ್ಟು 12 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಇದೆ.
ನಾಮ ಪತ್ರದಲ್ಲಿ, 2023-2024 ರ ಹಣಕಾಸು ವರ್ಷದಲ್ಲಿ ಬಾಡಿಗೆ ಆದಾಯ ಮತ್ತು ಬ್ಯಾಂಕ್‌ಗಳು ಮತ್ತು ಇತರ ಹೂಡಿಕೆಗಳಿಂದ ಬಡ್ಡಿಯನ್ನು ಒಳಗೊಂಡಂತೆ ಒಟ್ಟು ರೂ 46.39 ಲಕ್ಷ ಆದಾಯವನ್ನು ಪ್ರಿಯಾಂಕಾ ಘೋಷಿಸಿದ್ದಾರೆ.
ನಾಮಪತ್ರದ ಜೊತೆಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತನ್ನ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರಗಳನ್ನು ನೀಡಿದ ಪ್ರಿಯಾಂಕಾ ಗಾಂಧಿ, ಮೂರು ಬ್ಯಾಂಕ್ ಖಾತೆಗಳಲ್ಲಿ ವಿವಿಧ ಮೊತ್ತದ ಠೇವಣಿ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ, ಪಿಪಿಎಫ್, ಹೋಂಡಾ ಸಿಆರ್‌ವಿ ಕಾರು ಸೇರಿದಂತೆ 4.24 ಕೋಟಿ ರೂ.ಗೂ ಹೆಚ್ಚು ಚರ ಆಸ್ತಿ ಹೊಂದಿರುವುದಾಗಿ ಹೇಳಿದ್ದಾರೆ. ಪತಿ ರಾಬರ್ಟ್ ವಾದ್ರಾ 1.15 ಕೋಟಿ ಮೌಲ್ಯದ 4400 ಗ್ರಾಂ (ಒಟ್ಟು) ಚಿನ್ನವನ್ನು ತಮಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಪ್ರಿಯಾಂಕ ವಾದ್ರ ಅಫಿಡವಿಟ್ ನಲ್ಲಿ ಹೇಳಿದ್ದಾರೆ.
ನವದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿ 2.10 ಕೋಟಿ ರೂ ಮೌಲ್ಯದ ಎರಡು ಪಿತ್ರಾರ್ಜಿತ ಕೃಷಿ ಭೂಮಿ ಮತ್ತು ಅದರಲ್ಲಿರುವ ಫಾರ್ಮ್‌ಹೌಸ್ ಕಟ್ಟಡದಲ್ಲಿ ಅರ್ಧ ಪಾಲು ಸೇರಿ ಪ್ರಿಯಾಂಕ ವಾದ್ರ ಬಳಿ 7.74 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿಗಳನ್ನು ಹೊಂದಿದ್ದಾರೆ.