ನವದೆಹಲಿ: ಜಮ್ಮು-ಕಾಶ್ಮೀರದ ಜಮಾತ್-ಎ-ಇಸ್ಲಾಮಿ ಮೇಲಿನ ನಿಷೇಧವನ್ನು ದೆಹಲಿ ಹೈಕೋರ್ಟ್‌ನ ನ್ಯಾಯಮಂಡಳಿ ಕಾಯಂಗೊಳಿಸಿದೆ.
'ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಸೆಕ್ಷನ್3(1)ರಡಿ ಜಮಾತ್-ಎ-ಇಸ್ಲಾಮಿ, ಕಾನೂನೂಬಾಹಿರ ಸಂಘಟನೆ ಎಂಬುದಾಗಿ ಘೋಷಿಸಲು ಸಾಕಷ್ಟು ಸಮರ್ಥನೆಗಳಿವೆ ಹಾಗೂ ಸಂಘಟನೆ ನಿಷೇಧಿಸಿ ಫೆಬ್ರುವರಿ 27ರಂದು ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಸಮರ್ಥನೀಯವಾಗಿದೆ' ಎಂದು ನ್ಯಾಯಮೂರ್ತಿ ನವೀನ್ ಚಾವ್ಲಾ ನೇತೃತ್ವದ ನ್ಯಾಯಮಂಡಳಿ ಹೇಳಿದೆ.
'ಜಮಾತ್-ಎ-ಇಸ್ಲಾಮಿ ಸಂಘಟನೆಯು ಜಮ್ಮು ಮತ್ತು ಕಾಶ್ಮೀರದ ಆಂತರಿಕ ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಹಾನಿ ಉಂಟು ಮಾಡಲಿದೆ. ದೇಶದ ಏಕತೆಗೆ ಧಕ್ಕೆ ತರುವ ಸಂಭವ ಇದೆ' ಎಂಬ ಆರೋಪದಡಿ ಸಂಘಟನೆಯನ್ನು ಮತ್ತೆ ಐದು ವರ್ಷ ನಿಷೇಧಿಸಿ, ಗೃಹ ಸಚಿವಾಲಯ ಫೆಬ್ರುವರಿಯಲ್ಲಿ ಅಧಿಸೂಚನೆ ಹೊರಡಿಸಿತ್ತು.
ಸಂಘಟನೆ ವಿರುದ್ಧ ದಾಖಲಾಗಿದ್ದ 47 ಪ್ರಕರಣಗಳನ್ನು ಸಚಿವಾಲಯ ಪಟ್ಟಿ ಮಾಡಿತ್ತು.
ನಿಷೇಧಿತ ಜಮಾತ್-ಇ-ಇಸ್ಲಾಮಿ ಸಂಘಟನೆ ಕೆಲ ಸದಸ್ಯರು ಇತ್ತೀಚೆಗೆ ನಡೆದ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದು, ಸಂಘಟನೆ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ ಎಂಬ ಊಹಾಪೋಹಕ್ಕೆ ಕಾರಣವಾಗಿತ್ತು. ಹೀಗಾಗಿ, ಸಂಘಟನೆ ಮೇಲಿನ ನಿಷೇಧವನ್ನು ದೆಹಲಿ ಹೈಕೋರ್ಟ್ ನ್ಯಾಯಮಂಡಳಿ ಕಾಯಂಗೊಳಿಸಿದ್ದಕ್ಕೆ ಮಹತ್ವ ಬಂದಿದೆ.