ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿರುವ ಒಮರ್ ಅಬ್ದುಲ್ಲಾ, ಕೇಂದ್ರ ಸರ್ಕಾರವು ಶೀಘ್ರದಲ್ಲೇ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ನಾವು ಜನಾದೇಶವನ್ನು ಪಡೆದಿದ್ದೇವೆ. ಅಧಿಕಾರ ವಹಿಸಿದ ಮೊದಲ ದಿನದಿಂದಲೇ ಜನಸಾಮಾನ್ಯರ ಸಮಸ್ಯೆ ಬಗೆಹರಿಸಲು ಕೆಲಸಗಳನ್ನು ಆರಂಭಿಸಲಿದ್ದೇವೆ' ಎಂದು ಅವರು ಹೇಳಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಇಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಉಪಸ್ಥಿತರಿದ್ದರು.
ಎನ್‌ಸಿ ಹಾಗೂ ಕಾಂಗ್ರೆಸ್ ಮೈತ್ರಿಯಲ್ಲಿ ಭಿನ್ನಮತ ಇದೆ ಎಂಬ ಆರೋಪಗಳನ್ನು ತಳ್ಳಿ ಹಾಕಿರುವ ಅವರು, 'ಹಾಗಾದರೆ ಕಾಂಗ್ರೆಸ್ ನಾಯಕರಾದ ಖರ್ಗೆ, ರಾಹುಲ್ ಇಲ್ಲಿಗೆ ಏಕೆ ಬರಬೇಕು? ನಮ್ಮ ಮೈತ್ರಿ ಬಲವಾಗಿದ್ದು, ಜಮ್ಮು-ಕಾಶ್ಮೀರದ ಜನರಿಗಾಗಿ ಕೆಲಸ ಮಾಡಲಿದ್ದೇವೆ' ಎಂದು ಹೇಳಿದ್ದಾರೆ.
2018ರಿಂದ ಜಮ್ಮು-ಕಾಶ್ಮೀರದಲ್ಲಿ ಚುನಾಯಿತ ಸರ್ಕಾರ ಇಲ್ಲದ ಕಾರಣ ಜನರ ಧ್ವನಿ ಕೇಳಿಸುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಅದಕ್ಕಾಗಿ ಜನರ ಧ್ವನಿಯಾಗುವುದು ನಮ್ಮ ಮೊದಲ ಆದ್ಯತೆಯಾಗಿದೆ. ನಾವು ಜನರ ಧ್ವನಿಯಾಗಬೇಕು. ಅದನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್‌ಸಿ)-ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟ ಸರಳ ಬಹುಮತ ಪಡೆದಿದೆ. ಎನ್‌ಸಿ 42, ಕಾಂಗ್ರೆಸ್ ಆರು ಸ್ಥಾನಗಳಲ್ಲಿ ಗೆಲುವು ಗಳಿಸಿತ್ತು. ಎಎಪಿ ಒಂದು ಮತ್ತು ನಾಲ್ವರು ಪಕ್ಷೇತರರ ಬೆಂಬಲವಿದೆ.
ಈ ಹಿಂದೆ ಎನ್‌ಸಿ-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ 2009ರಿಂದ 2014ರ ಅವಧಿಯಲ್ಲಿ ಒಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾಗಿದ್ದರು.