ನವದೆಹಲಿ: 'ಭಾರತಕ್ಕೆ 'ಧಾರ್ಮಿಕ ಸ್ವಾತಂತ್ರ್ಯವು ತೀವ್ರ ಉಲ್ಲಂಘನೆಯಾಗುತ್ತಿರುವ ದೇಶ' ಎಂಬ ಹಣೆಪಟ್ಟಿ ಕಟ್ಟಿ' ಎಂದು ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು (ಯುಎಸ್‌ಸಿಐಆರ್‌ಎಫ್) ಅಮೆರಿಕ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಆಯೋಗವು ತನ್ನ ವಾರ್ಷಿಕ ವರದಿಯಲ್ಲಿ ಈ ಶಿಫಾರಸು ಮಾಡಿದ್ದು, 'ವಿಭಜನಕಾರಿ ರಾಷ್ಟ್ರೀಯತೆ ನೀತಿ, ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳ ದ್ವೇಷ ಭಾಷಣಗಳು ಹೆಚ್ಚಾಗುತ್ತಿರುವ ಕಾರಣ ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯವು ದಿನೇ ದಿನೇ ಕ್ಷೀಣಿಸುತ್ತಿದೆ.
'ದೇಶದಲ್ಲಿನ ಅಲ್ಪಸಂಖ್ಯಾತರಾದ ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು, ಜೈನರು, ಸಿಖ್ಖರು, ಯಹೂದಿಗಳು ಹಾಗೂ ಆದಿವಾಸಿಗಳ ಮೇಲೆ ಭಾರತ ಸರ್ಕಾರವು ವ್ಯವಸ್ಥಿತವಾದ ದಾಳಿ ನಡೆಸುತ್ತಿದೆ' ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ, ಅಮೆರಿಕ ವಿದೇಶಾಂಗ ಸಚಿವಾಲಯವು ಈ ವರದಿಯನ್ನು ತಡೆಹಿಡಿದಿದೆ.
ಅಲ್ಪಸಂಖ್ಯಾತರ ಮೇಲೆ 2023ರಲ್ಲಿ ದೇಶದಲ್ಲಿ ನಡೆದ ಹಲವು ಹಿಂಸಾತ್ಮಕ ದಾಳಿಗಳ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ. 'ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ), ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾನೂನುಗಳನ್ನು ಬಳಸಿಕೊಂಡು ಅಲ್ಪಸಂಖ್ಯಾತರು ಹಾಗೂ ಅವರ ಹಕ್ಕುಗಳ ಕುರಿತು ಹೋರಾಡುವವರನ್ನು ಬಂಧಿಸಲಾಗುತ್ತಿದೆ' ಎಂದು ಹೇಳಿದೆ.
ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರದಿಂದ ಆರಂಭಗೊಂಡು, ಈಗಿನವರೆಗೂ ಯುಎಸ್‌ಸಿಐಆರ್‌ಎಫ್ ಅಧಿಕಾರಿಗಳಿಗೆ ಭಾರತ ಪ್ರವೇಶವನ್ನು ನಿರಾಕರಿಸಲಾಗಿದೆ.
ಅಮೆರಿಕ ಸರ್ಕಾರಕ್ಕೆ ಆಯೋಗದ ಶಿಫಾರಸು
l ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಒಡ್ಡುವ ಮೂಲಕ ಹಿಂಸೆಗೆ ಕಾರಣರಾಗುವ ವ್ಯಕ್ತಿಯ ಮೇಲೆ ಹಣಕಾಸು ಸೇರಿದಂತೆ ಹಲವು ನಿರ್ಬಂಧ ಹೇರಿ. ಅಂಥ ವ್ಯಕ್ತಿಗೆ ಅಮೆರಿಕ ಪ್ರವೇಶವನ್ನು ನಿರ್ಬಂಧಿಸಿ
l ದ್ವಿಪಕ್ಷೀಯ ಒಪ್ಪಂದಗಳನ್ನು ರಚಿಸಿಕೊಳ್ಳುವಾಗ ಆ ದೇಶದ ಧಾರ್ಮಿಕ ಸ್ವಾತಂತ್ರ್ಯದ ಆದ್ಯತೆಗಳನ್ನೂ ಪರಾಮರ್ಶಿಸಿ
l 'ಭಯೋತ್ಪಾದನೆಗೆ ಹಣಕಾಸಿನ ನೆರವು ತಡೆ'ಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಮಟ್ಟದ ಕೆಲವು ಶಿಫಾರಸುಗಳನ್ನು ಭಾರತವು ದೇಶದಲ್ಲಿನ ಅಲ್ಪಸಂಖ್ಯಾತರನ್ನು ಹಾಗೂ ಅವರ ಹಕ್ಕುಗಳನ್ನು ಪ್ರತಿಪಾದಿಸುವವರನ್ನು ಬಂಧಿಸುವುದಕ್ಕೆ ಬಳಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ
l ಭಾರತವು ತನ್ನ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಯನ್ನು ಸುಧಾರಿಸಿಕೊಂಡರಷ್ಟೇ ಆ ದೇಶಕ್ಕೆ ಆರ್ಥಿಕ ನೆರವು ಹಾಗೂ ಶಸ್ತ್ರಾಸ್ತ್ರ ಪೂರೈಕೆ ಮಾಡಿ
ರಾಜಕೀಯ ಅಜೆಂಡಾ ಇಟ್ಟುಕೊಂಡಿರುವ ಪಕ್ಷಪಾತಿ ಧೋರಣೆಯುಳ್ಳ ಆಯೋಗ ಇದಾಗಿದೆ. ಅಮೆರಿಕದಲ್ಲಿರುವ ಮಾನವ ಹಕ್ಕುಗಳ ಉಲ್ಲಂಘನೆಯ ವಿಚಾರಗಳ ಬಗ್ಗೆ ಗಮನಹರಿಸಿ' ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ವರದಿಗೆ ಪ್ರತಿಕ್ರಿಯಿಸಿದ್ದಾರೆ. ಭಾರತವು ಈ ವರದಿಯನ್ನು ತಳ್ಳಿಹಾಕಿದೆ.