ತಿರುವನಂತಪುರಂ: ಮಲಪ್ಪುರಂಗೆ ಕಳ್ಳಸಾಗಣೆ ಮೂಲಕ ಬರುತ್ತಿರುವ ಚಿನ್ನ ಮತ್ತು ಹಣವನ್ನು ದೇಶದ್ರೋಹದ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದು, ಮುಖ್ಯಮಂತ್ರಿಗಳ ಹೇಳಿಕೆ ಗಮನಕ್ಕೆ ಬಂದಿದ್ದು, ಈ ಕುರಿತು ವರದಿ ಕೇಳುವುದಾಗಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಹೇಳಿದ್ದಾರೆ.
ಚಿನ್ನಾಭರಣ ಕಳ್ಳಸಾಗಣೆ ನಡೆಯುತ್ತಿರುವುದು ಗೊತ್ತಿದ್ದರೂ ಇಂತಹ ಗಂಭೀರ ವಿಷಯದ ಬಗ್ಗೆ ಮುಖ್ಯಮಂತ್ರಿ ಏಕೆ ಕ್ರಮ ಕೈಗೊಳ್ಳಲಿಲ್ಲ? ಚಿನ್ನ ಕಳ್ಳಸಾಗಣೆ ಮಾಡುತ್ತಿರುವವರು ಯಾರು, ಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ಸರ್ಕಾರಕ್ಕೆ ಗೊತ್ತಿದೆ ಎಂದು ರಾಜ್ಯಪಾಲರು ಹೇಳಿದರು.
ಇದು ರಾಷ್ಟ್ರೀಯ ಭದ್ರತೆಯ ಮೇಲೆಯೇ ಪರಿಣಾಮ ಬೀರುವ ದೊಡ್ಡ ಸಮಸ್ಯೆಯಾಗಿದೆ. ಮುಖ್ಯಮಂತ್ರಿಗಳು ಈ ಮಾಹಿತಿ ಪಡೆದಿರುವÀರು. ಅದರ ಬಗ್ಗೆ ಕ್ರಮ ಕೈಗೊಳ್ಳುವ ಜವಾಬ್ದಾರಿ ಮತ್ತು ಅಧಿಕಾರ ಅವರಿಗಿದೆ. ಬೇಕಿರುವುದು ಕ್ರಮ, ಮಾಧ್ಯಮಗಳಿಗೆ ಹೇಳುವುದಲ್ಲ. ರಾಜ್ಯದಲ್ಲಿ ಇಂತಹ ಅಕ್ರಮಗಳು ನಡೆಯುತ್ತಿದ್ದರೆ ಅದು ಯಾರ ತಪ್ಪು ಎಂದು ರಾಜ್ಯಪಾಲರು ಪ್ರಶ್ನಿಸಿದರು.
ಆಂಗ್ಲ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮುಖ್ಯಮಂತ್ರಿ ಮಲಪ್ಪುರಂ ಕುರಿತು ಉಲ್ಲೇಖಿಸಿರುವುದು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಐದು ವರ್ಷಗಳಲ್ಲಿ ಮಲಪ್ಪುರಂ ಒಂದರಲ್ಲೇ 150 ಕೆಜಿ ಚಿನ್ನ ಮತ್ತು 123 ಕೋಟಿ ಮೌಲ್ಯದ ಹವಾಲಾ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಹಿರಂಗಪಡಿಸಿದ ಮುಖ್ಯಮಂತ್ರಿ, ಈ ಹಣವನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದರು.