ಉಪ್ಪಳ: ಸಮಾಜದಲ್ಲಿ ಧನಾನ್ಮಕ ವಿಷಯಗಳನ್ನು ಹರಡುವ, ಸಕಾರಾತ್ಮಕ ಚಿಂತನೆಗಳಿಗೆ ಎಡೆಮಾಡುವ ಮತ್ತು ಆಧ್ಯಾತ್ಮಿಕ ಅನುಭೂತಿಗಳಿಗೆ ಕೊಂಡೊಯ್ಯುವ ಮಾಧ್ಯಮಗಳು ನೈಜವಾದ ಸಮಾಜ ಚಿಕಿತ್ಸಕ ಶಕ್ತಿಯಾಗಿದೆ ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ತಿಳಿಸಿದರು.
ಕಾಸರಗೋಡಿನ ಆನ್ ಲೈನ್ ಪತ್ರಿಕೆ ಸಮರಸ ಸುದ್ದಿ ಹೊರತಂದಿರುವ ‘ಸಮರಸ ವಾರಿಧಿ’ ಇ-ಆನ್ ಲೈನ್ ಮಾಸಪತ್ರಿಕೆಯ ಎರಡನೇ ಸಂಚಿಕೆಯನ್ನು ಇಂದು(ಬುಧವಾರ) ಶ್ರೀಮಠದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಳೆದ ಎಂಟು ವರ್ಷಗಳಿಂದ ಸಮರಸ ಸುದ್ದಿ ದೈನಂದಿನ ಸುದ್ದಿ ಪ್ರಸಾರದಲ್ಲಿ ಉತ್ಕøಷ್ಟತೆಯೊಂದಿಗೆ ಧನಾತ್ಮಕ ಸುದ್ದಿ ನಿರ್ವಹಣೆಯಲ್ಲಿ ಶ್ಲಾಘನಾರ್ಹ ಕರ್ತವ್ಯ ನಿರ್ವಹಿಸಿದೆ. ಪ್ರಸ್ತುತ ಪ್ರಕಟಗೊಳ್ಳುತ್ತಿರುವ ವಾರಿಧಿ ಹಿರಿಯ-ಕಿರಿಯ ಬರಹಗಾರರಿಗೆ ಉತ್ತಮ ಅವಕಾಶದೊಂದಿಗೆ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಚಿಂತನ-ಮಂಥನಗಳಿಗೆ ವೇದಿಕೆಯಾಗಿ ಯಶಸ್ವಿಯಾಗಲಿ ಎಂದು ಅವರು ಹಾರೈಸಿ ಆಶೀರ್ವದಿಸಿದರು.
ಸಮರಸ ಸುದ್ದಿ-ವಾರಧಿ ಬಳಗದ ಪ್ರಧಾನ ಸಂಪಾದಕಿ ಶ್ರೀಮತಿ.ಅಕ್ಷತಾ ಭಟ್.ಪುದುಕೋಳಿ, ಸಹ ಸಂಪಾದಕ ಪುರುಷೋತ್ತಮ ಭಟ್ ಕೆ., ನಿವೃತ್ತ ವಾಯುಸೇನಾಧಿಕಾರಿ ತಿರುಮಲೇಶ್ವರ ಭಟ್ ಪಜ್ಜ, ಅನಿಲ್ ಕೊಂಡೆವೂರು ಉಪಸ್ಥಿತರಿದ್ದರು.
ಸಮರಸ ವಾರಧಿಯ ಎರಡನೇ ಸಂಚಿಕೆ 24 ಪುಟಗಳೊಂದಿಗೆ ಜಾಲತಾಣದಲ್ಲಿ ಲಭ್ಯವಿದೆ. ಶಿಕ್ಷಣ ತಜ್ಞ, ಸಾಮಾಜಿಕ ಕಾರ್ಯಕರ್ತ ಕೃಷ್ಣ ಆಳ್ವ.ಅನಂತಪುರ,ಪತ್ರಕರ್ತ ವಿರಾಜ ಅಡೂರು, ಹಿರಿಯ ವೈದ್ಯ, ಸಾಹಿತಿ, ಯಕ್ಷಗಾನ ಅರ್ಥಧಾರಿ ಡಾ.ರಮಾನಂದ ಬನಾರಿ, ಯುವ ಲೇಖಕಿ ಚೇತನಾ ಕುಂಬ್ಳೆ, ಹಿರಿಯ ಸಾಹಿತಿ ಹರೀಶ್ ಪೆರ್ಲ, ಆರ್ಥಿಕ ತಜ್ಞ ರಂಗಾ ಶರ್ಮಾ ಉಪ್ಪಂಗಳ, ಲೇಖಕಿ ಶ್ವೇತಾ ರಮೇಶ್, ಪತ್ರಕರ್ತ ವಿವೇಕಾನಂದ ಎಚ್.ಕೆ, ಸಾಹಿತಿ, ಪತ್ರಕರ್ತ, ಬಳಗದ ಗುರು ರಾಧಾಕೃಷ್ಣ ಕೆ.ಉಳಿಯತ್ತಡ್ಕ, ವಿದ್ಯಾರ್ಥಿನಿ, ಯುವ ಬರಹಗಾರ್ತಿ ಕೆ.ಶಿವಾನಿ ಪೈವಳಿಕೆ ಮೊದಲಾದವರು ಈ ಸಂಚಿಕೆಗೆ ತಮ್ಮ ಅಕ್ಷರ ಕಾಣ್ಕೆಯ ಮೂಲಕ ಬೆಂಬಲಿಸಿದ್ದಾರೆ.
ವಾರಿಧಿಯ ಓದಿಗೆ ಲಿಂಕ್ ಕ್ಲಿಕ್ ಮಾಡಿ: http://www.samarasasudhi.com/