ಕಾಸರಗೋಡು:ನವೋದಯದಿಂದ ನವ್ಯದೆಡೆಗೆ ಹೊರಳಿದ ಕನ್ನಡ ಸಾಹಿತ್ಯ ವಲಯದ ಸಂಧಿ ಕಾಲಘಟ್ಟದಲ್ಲಿ ಕಾಸರಗೋಡಿನ ಸಾಹಿತ್ಯ ವಲಯದಲ್ಲಿ ಪ್ರಧಾನ ಭೂಮಿಕೆಯೊದಗಿಸಿದ ಪ್ರಮುಖರಲ್ಲಿ ದಿ.ಎಂ.ಗಂಗಾಧರ ಭಟ್ಟರು ಮಹತ್ತರ ಪಾತ್ರ ವಹಿಸಿದ್ದರು ಎಂದು ಸಾಹಿತಿ, ರಂಗಕರ್ಮಿ ಬಿ.ರಾಮಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಮಾಜಿಕ, ಸಾಂಸ್ಕøತಿಕ ಸಂಘಟನೆಯಾದ ರಂಗಚಿನ್ನಾರಿ ಕಾಸರಗೋಡು ನೇತೃತ್ವದಲ್ಲಿ ಸೋಮವಾರ ಅಪರಾಹ್ನ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ನಡೆದ ಕವಿ, ಕನ್ನಡ ಹೋರಾಟಗಾರ, ಪತ್ರಕರ್ತ, ಅಧ್ಯಾಪಕ ದಿ.ಎಂ.ಗಂಗಾಧರ ಭಟ್ ಅವರ 29ನೇ ಸಂಸ್ಮರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಕಲ ಕಲಾ ಸಾಧಕರಾಗಿ ಶತಾಯುಷ್ಯದಲ್ಲಿ ಮಾಡಬಹುದಾದ ಸಾಧನೆಗಳನ್ನು ಅಲ್ಪ ಅವಧಿಯಲ್ಲೇ ನಿರ್ವಹಿಸಿ ಅಕಾಲದಲ್ಲಿ ಅಗಲಿದ ಗಂಗಾಧರ ಭಟ್ಟರು ಕಾಸರಗೋಡಿನ ಕನ್ನಡ ಚಳವಳಿಯ 1972ರ ಕಾಲಘಟ್ಟದ ಹೊಸ ಹೊರಳುವಿಕೆಯಲ್ಲಿ ನೇತೃತ್ವ ವಹಿಸಿದ್ದವರು. ಇಲ್ಲಿಯ ಸಾಹಿತ್ಯ, ಸಾಂಸ್ಕøತಿಕ, ಭಾಚಾ ಚಳವಳಿಯ ಆದ್ಯ ಪ್ರವರ್ತಕರಲ್ಲೂ ಒಬ್ಬರಾಗಿ ನೆನಪುಗಳನ್ನು ಬಿಟ್ಟುಹೋದ ಮಹಾನ್ ಸಾಧಕ ಎಂದವರು ಬಣ್ಣಿಸಿದರು.
ಗಂಗಾಧರ ಭಟ್ಟರ ಗರಡಿಯಲ್ಲಿ ಪಳಗಿದವರಲ್ಲೊಬ್ಬರಾದ ನ್ಯಾಯವಾದಿ. ಎ.ಬಾಲಕೃಷ್ಣ ನಾಯರ್ ಅವರು ದೀಪ ಬೆಳಗಿಸಿ, ಗಂಗಾಧರ ಭಟ್ಟರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿ, ಸಾಹಿತ್ಯ, ಸಂಘಟನೆಗಳ ಹೊರತಾಗಿ ಅಪ್ರತಿಮ ಆಂಗ್ಲ ಶಿಕ್ಷಕರಾಗಿ ಭಟ್ಟರ ಫ್ರೌಢಿಮೆ ಅಗಾಧವಾದುದಾಗಿತ್ತು. ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಪಕವಾಗಿ ಬೆಳೆಯಬಹುದಾಗಿದ್ದರೂ ನಾಡು-ನುಡಿಯ ಸೆಳೆತದಿಂದ ಅವರಲ್ಲೇ ಉಳಿದು ಇಂದಿಗೂ ನಮ್ಮೊಳಗೆ ಬೆಳಗುವ ಅತ್ಯುಚ್ಛ ನೆನಪುಗಳನ್ನು ಬಿಟ್ಟುಹೋಗಿದ್ದಾರೆ ಎಂದು ನೆನಪಿಸಿದರು.
ರಂಗಚಿನ್ನಾರಿಯ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಂಗಾಧರ ಭಟ್ಟರಿಂದ ಆರ್ಜಿಸಿದ ಶಿಕ್ಷಣ, ಸಾಹಿತ್ಯ, ಸಾಂಸ್ಕøತಿಕ ಬೆಂಬಲ ಎಂದಿಗೂ ಅವಿನಾಶಿ ಎಂದರು.ಕವಯಿತ್ರಿ ವಿಜಯಲಕ್ಷ್ಮೀ ಶಾನುಭೋಗ್ ಉಪಸ್ಥಿತರಿದ್ದು ನುಡಿ ನಮನ ಸಲ್ಲಿಸಿದರು.
ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರು, ಗಂಗಾಧರ ಭಟ್ಟರ ಬಗೆಗಿನ ನೆನಪುಗಳಿಂದ ಬರೆದ ಸ್ವರರಚಿತ ಕವನ ವಾಚಿಸಿದರು.ಟಿ.ಶಂಕರನಾರಾಯಣ ಭಟ್, ಸವಿತಾ ಟೀಚರ್,ಜಯನಾರಾಯಣ್ ತಾಯನ್ನೂರು, ಪತ್ರಕರ್ತ ಸುಬ್ಬಣ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರಂಗಚಿನ್ನಾರಿ ಸಂಚಾಲಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ರಂಗಚಿನ್ನಾರಿ ನಿರ್ದೇಶಕ ಸತ್ಯನಾರಾಯಣ ಕೆ.ವಂದಿಸಿದರು.