ನವದೆಹಲಿ: ಜನಪ್ರಿಯ ಆಯಪಲ್ ಕಂಪನಿ ಭಾರತದಲ್ಲಿ ತನ್ನ ನಾಲ್ಕು ಎಕ್ಸ್‌ಕ್ಲೂಸಿವ್ ಹೊಸ ಸ್ಟೋರ್‌ಗಳನ್ನು ತೆರೆಯಲು ಸಿದ್ದವಾಗಿದೆ.
ಬೆಂಗಳೂರು, ಪುಣೆ, ಮುಂಬೈ ಹಾಗೂ ದೆಹಲಿಯಲ್ಲಿ (NCR) ಆಯಪಲ್‌ನ ಹೊಸ ಸ್ಟೋರ್‌ಗಳು ತೆರೆಯಲಿವೆ ಎಂದು ಪ್ರಕಟಣೆ ತಿಳಿಸಿದೆ. ಈ ಸ್ಟೋರ್‌ಗಳು ಮುಂದಿನ ವರ್ಷದಿಂದ ಕಾರ್ಯಾರಂಭ ಮಾಡಬಹುದು ಎನ್ನಲಾಗಿದೆ.
ಮುಂಬೈನ ಜಿಯೊದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮಾಲ್‌ನಲ್ಲಿ (ಬಿಕೆಸಿ) ಆಯಪಲ್ ಸ್ಟೋರ್ ಕಳೆದ ವರ್ಷ ಆರಂಭವಾಗಿತ್ತು. ಈಗ ಎರಡನೇ ಸ್ಟೋರ್ ಮುಂಬೈನಲ್ಲಿ ಆರಂಭವಾಗುತ್ತಿದೆ. ದೆಹಲಿಯಲ್ಲಿಯೂ ಈ ಮೊದಲು ಸ್ಟೋರ್ ಆರಂಭವಾಗಿತ್ತು. ಈ ಮೂಲಕ ಆಯಪಲ್‌ನ 6 ಅಧಿಕೃತ ಸ್ಟೋರ್‌ಗಳು ಭಾರತದಲ್ಲಿ ಕಾರ್ಯಾರಂಭ ಮಾಡಿದಂತಾಗುತ್ತದೆ.
'ನಮ್ಮ ತಂಡದ ಸೇವೆಯನ್ನು ನಮ್ಮ ಭಾರತದ ಗ್ರಾಹಕರಿಗೆ ನೀಡಲು ನಾವು ಉತ್ಸುಕರಾಗಿದ್ದೇವೆ. ಇನ್ನು ಹೆಚ್ಚು ದಿನ ಕಾಯಿಸುವುದಿಲ್ಲ. ಬೆಂಗಳೂರು, ಪುಣೆ, ಮುಂಬೈ ಹಾಗೂ ದೆಹಲಿಯಲ್ಲಿ ಹೊಸ ಅಧಿಕೃತ ಸ್ಟೋರ್‌ಗಳನ್ನು ತೆರೆಯಲಿದ್ದೇವೆ' ಎಂದು ಆಯಪಲ್ ರಿಟೇಲ್‌ನ ಹಿರಿಯ ಉಪಾಧ್ಯಕ್ಷ ಡೀರ್ಡ್ರೆ ಒ'ಬ್ರಿಯಾನ್ ಹೇಳಿದ್ದಾರೆ.
ಇದರ ಜೊತೆಗೆ ಭಾರತದಲ್ಲಿ ತಯಾರಿಸಲಾದ ಆಯಪಲ್ ಐಫೋನ್ 16 ಸರಣಿಯ ಫೋನ್‌ಗಳನ್ನು ಭಾರತೀಯ ಗ್ರಾಹಕರಿಗೆ ಈ ತಿಂಗಳಾಂತ್ಯಕ್ಕೆ ಸಿಗುವ ಹಾಗೇ ನೋಡಿಕೊಳ್ಳಲಾಗುತ್ತದೆ ಎಂದು ಕಂಪನಿ ತಿಳಿಸಿದೆ.
2017ರಿಂದ ಭಾರತದಲ್ಲಿ ಆಯಪಲ್ ಐಫೋನ್‌ಗಳನ್ನು ಉತ್ಪಾದಿಸಲಾಗುತ್ತಿದೆ.