ರಾಂಚಿ: ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನದಲ್ಲಿನ ಅಕ್ರಮಗಳ ಜತೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ನ ಹಿರಿಯ ಐಎಎಸ್ ಅಧಿಕಾರಿ, ಮತ್ತು ಸಚಿವರೊಬ್ಬರಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ಶೋಧ ನಡೆಸಿದೆ.

ರಾಂಚಿಯ 20ಕ್ಕೂ ಹೆಚ್ಚು ಸ್ಥಳಗಳು, ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಚೈಬಾಸಾದ ಕೆಲ ಸ್ಥಳಗಳ ಮೇಲೆ ದಾಳಿಗಳನ್ನು ನಡೆಸಲಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.
ಭೂಮಿ, ರಸ್ತೆ ಮತ್ತು ಕಟ್ಟಡ ನಿರ್ಮಾಣ ಇಲಾಖೆಯ ಕಾರ್ಯದರ್ಶಿ ಮನೀಶ್ ರಂಜನ್, ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ ಮಿಥಿಲೇಷ್ ಕುಮಾರ್ ಠಾಕೂರ್ ಅವರ ಆಪ್ತ ಸಿಬ್ಬಂದಿ, ಅವರ ಸಹೋದರ, ಕೆಲ ಸರ್ಕಾರಿ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಉದ್ಯಮಿಗಳಿಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದರು ಎಂದು ಮೂಲಗಳು ಹೇಳಿವೆ.
ಈ ಹಿಂದೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಅಲಂಗಿರ್ ಆಲಂ ಅವರನ್ನು ಬಂಧಿಸಿದ್ದ ವೇಳೆ, ಜಾರಿ ನಿರ್ದೇಶನಾಲಯ ಮನೀಶ್ ರಂಜನ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.
'ಇ.ಡಿ ದಾಳಿಯು ಅನಿರೀಕ್ಷಿತವೇನಲ್ಲ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಈ ರೀತಿಯ ದಾಳಿಗಳು ನಡೆಯುತ್ತಲೇ ಇರುತ್ತವೆ' ಎಂದು ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ್ ಸೊರೇನ್ ಪ್ರತಿಕ್ರಿಯಿಸಿದ್ದಾರೆ.
'ಇದು ರಾಜಕೀಯ ಪ್ರೇರಿತ ದಾಳಿಯಾಗಿದ್ದು, ಎಷ್ಟೇ ಒತ್ತಡ ಹೇರಿದರೂ ನಾನು ಬಿಜೆಪಿ ಸೇರುವುದಿಲ್ಲ' ಎಂದು ಸಚಿವ ಮಿಥಿಲೇಷ್ ಕುಮಾರ್ ಠಾಕೂರ್ ಹೇಳಿದ್ದಾರೆ.
'ನನ್ನನ್ನು ನೇಣಿಗಾಕಿದರೂ ಅಥವಾ ಜೀವಿತಾವಧಿವರೆಗೂ ಜೈಲಿನಲ್ಲಿ ಇರುವಂತೆ ಮಾಡಿದರೂ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ' ಎಂದು ಅವರು ತಿಳಿಸಿದ್ದಾರೆ.