ನವದೆಹಲಿ: ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ಕಿರುಕುಳ ಎದುರಿಸಿರುವ ಮಹಿಳೆಯರಿಗೆ ನೆರವು ಒದಗಿಸಬೇಕು ಎಂದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಮತ್ತು ಇತರರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ನ್ಯಾಯ ಪಡೆಯಲು ಅವಕಾಶ ಕಲ್ಪಿಸುವುದು ನ್ಯಾಯದಾನದಷ್ಟೇ ಮುಖ್ಯ ಎಂದು ಕೋರ್ಟ್ ಹೇಳಿದೆ.

ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಎದುರಾದಲ್ಲಿ ಅದರ ಬಗ್ಗೆ ಆನ್‌ಲೈನ್ ಮೂಲಕ ದೂರು ನೀಡಲು ಸೌಲಭ್ಯ ಕಲ್ಪಿಸುವ 'ಶಿ-ಬಾಕ್ಸ್'ಅನ್ನು ಆಗಸ್ಟ್‌ನಲ್ಲಿ ಪರಿಷ್ಕೃತ ರೂಪದಲ್ಲಿ ಆರಂಭಿಸಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೇಳಿದೆಯಾದರೂ, ಕೆಲವು ನಿರ್ದೇಶನಗಳನ್ನು ನೀಡಬೇಕಾಗಿದೆ ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇರುವ ಪೀಠವು ಹೇಳಿತು.
ಮಹಿಳೆಯರಿಗೆ ಕೆಲಸದ ಸ್ಥಳಗಳು ಸುರಕ್ಷಿತವಾಗುವಂತೆ ಮಾಡಲು ಹಾಗೂ ದೂರು ನೀಡುವ ವ್ಯವಸ್ಥೆ ಲಭ್ಯವಾಗುವಂತೆ ಮಾಡಲು 'ಶಿ-ಬಾಕ್ಸ್' ಬಹಳ ಪ್ರಮುಖ ಹೆಜ್ಜೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ವಿವರಿಸಿದರು. ಕಿರುಕುಳದ ಬಗ್ಗೆ ವರದಿ ಮಾಡಲು ಮಹಿಳೆಯರಿಗೆ ಇದು ಬಹಳ ಸುರಕ್ಷಿತವಾದ ಹಾಗೂ ಗೋಪ್ಯವಾದ ಮಾರ್ಗವನ್ನು ಒದಗಿಸುತ್ತದೆ ಎಂದು ಐಶ್ವರ್ಯಾ ತಿಳಿಸಿದರು.
ಆದರೆ, ಕಿರಕುಳಕ್ಕೆ ಗುರಿಯಾಗಿರುವ ಮಹಿಳೆಗೆ 'ಶಿ-ಬಾಕ್ಸ್' ಸೌಲಭ್ಯವನ್ನು ಬಳಸಿ ನೇರವಾಗಿ ದೂರು ನೀಡಲು ಸಾಧ್ಯವಾಗದೆ ಇರಬಹುದು ಎಂದು ಪ್ರಕರಣದ ಅಮಿಕಸ್ ಕ್ಯೂರಿ ಪದ್ಮಪ್ರಿಯಾ ಹೇಳಿದರು.
'ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯ್ದೆ-2013'ರ ಅಡಿಯಲ್ಲಿ ಆಂತರಿಕ ದೂರು ಸಮಿತಿ ರಚಿಸುವುದು ಸರ್ಕಾರಿ, ಖಾಸಗಿ ಸಂಸ್ಥೆಗಳ ಹೊಣೆ ಎಂದು ಪೀಠವು ಹೇಳಿದೆ.