ಕಾಸರಗೋಡು: ಬೆಂಗಳೂರಿನ ಅಲ್ಸೂರ್‍ಗೇಟ್ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 2ಸಾವಿರ ರೂ. ಮುಖಬೆಲೆಯ 52.40ಲಕ್ಷ ರೂ. ಮೊತ್ತದ ನಕಲಿ ನೋಟು ವಶಪಡಿಸಿಕೊಂಡಿದ್ದು, ಕಾಸರಗೋಡಿನ ಮೂವರು ಸೇರಿದಂತೆ ಐದು ಮಂದಿಯನ್ನು ಬಂಧಿಸಿದ್ದಾರೆ. ಕಾಸರಗೋಡು ನಿವಾಸಿಗಳಾದ ಮಹಮ್ಮದ್ ಅಪ್ನಾಸ್, ನೂರುದ್ದೀನ್ ಅಲಿಯಾಸ್ ಅನ್ವರ್, ಪ್ರಿಯೇಶ್, ಪಾಂಡಿಚೇರಿ ನಿವಾಸಿ ಪ್ರಸೀತ್ ಹಾಗೂ ಬಳ್ಳಾರಿ ಸಿರಗುಪ್ಪದ ಸಿರಿಗೆರೆ ನಿವಾಸಿ ಎ.ಕೆ ಅಪ್ಸಲ್ ಹುಸೈನ್ ಬಂಧಿತರು. ಬಳ್ಳಾರಿಯಲ್ಲಿ ಗ್ರಾನೈಟ್ ವ್ಯಾಪಾರ ನಡೆಸುತ್ತಿರುವ ಅಪ್ಸಲ್ ಹುಸೈನ್ ಸೆ. 9ರಂದು 2ಸಾವಿರ ರೂ. ಮುಖಬೆಲೆಯ 24.68ಲಕ್ಷ ರೂ. ಮೊತ್ತವನ್ನು ಬೆಂಗಳೂರು ನೃಪತುಂಗ ರಸ್ತೆಯ ಭಾರತೀಯ ರಿಸರ್ವ್ ಬ್ಯಾಂಕ್ ಶಾಖೆಗೆ ಪಾವತಿಸಿ 500ರೂ. ಮುಖಬೆಲೆಯ ನೋಟು ಪಡೆಯಲು ಯತ್ನಿಸಿದ್ದನು. ನೋಟಿನ ಸಾಚಾತನ ಪರಿಶೀಲಿಸಿದಾಗ ನಕಲಿ ಎಂಬುದು ಸಾಬೀತಾಗಿದ್ದು, ಬ್ಯಾಂಕ್ ಪ್ರಬಂಧಕ ನೀಡಿದ ದೂರಿನನ್ವಯ ಅಪ್ಸಲ್ ಹುಸೈನ್‍ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ನಕಲಿ ನೋಟಿನ ದಂಧೆ ಬಯಲಾಗಿತ್ತು. ಈತ ನೀಡಿದ ಮಾಹಿತಿಯನ್ವಯ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಿಂದ 27.72ಲಕ್ಷ ರೂ. ವಶಪಡಿಸಿಕೊಳ್ಳಲಾಗಿತ್ತು.
ಬಂಧಿತ ಪ್ರಿಯೇಶ್ ಕಳೆದ 20ವರ್ಷಗಳಿಂದ ಚೆರ್ಕಳದಲ್ಲಿ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದು, ಕೋಯಿಕ್ಕೋಡಿನಿಂದ ನೋಟು ಮುದ್ರಣದ ವಿಶೇಷ ಪೇಪರ್, ಇಂಕ್ ಹಾಗೂ ಇತರ ಸಾಮಗ್ರಿ ತಂದು ತನ್ನ ಪ್ರೆಸ್‍ನಲ್ಲಿ ನಕಲಿ ನೋಟು ಮುದ್ರಿಸಿ ವಿವಿಧೆಡೆ ವಿತರಿಸುತ್ತಿರುವುದು ಸ್ಪಷ್ಟಗೊಂಡಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಸೈಬರ್ ಕ್ರೈಂ ಪೊಲೀಸರು ಈತನನ್ನು ಬಂಧಿಸಿದ್ದರು.