ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ವಿಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಸರಳ ಬಹುಮತ ಪಡೆಯುವಲ್ಲಿ ವಿಫಲವಾಗಿರುವಂತೆಯೇ, ಇತರ ಅಂಗಪಕ್ಷಗಳು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿವೆ.
'ಮಿತ್ರ ಪಕ್ಷಗಳಿಗಿಂತ ತಾನೇ ಹೆಚ್ಚು' ಎಂಬ ಧೋರಣೆ ತಳೆದಿದ್ದೇಕೆ ಎಂದು 'ಇಂಡಿಯಾ' ಅಂಗಪಕ್ಷಗಳು ಕಾಂಗ್ರೆಸ್ ಅನ್ನು ಪ್ರಶ್ನಿಸಿವೆ, 'ತನಗೆ ಎದುರಾಗಿದ್ದ ತೊಂದರೆಗಳ ನಿವಾರಣೆಗೆ ನಮ್ಮ ಸ್ನೇಹಪರತೆಯನ್ನು ಬಳಸಿಕೊಂಡ ಕಾಂಗ್ರೆಸ್, ನಮ್ಮ ಸಾಮರ್ಥ್ಯವನ್ನು ಕಡೆಗಣಿಸಿತು' ಎಂದೂ ದೂರಿವೆ.
ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗದ ಕಾರಣ, 'ಇಂಡಿಯಾ' ಕೂಟದ 'ಮಿತ್ರ' ಪಕ್ಷಗಳು, ಈಗ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿವೆ. ಉತ್ತರ ಪ್ರದೇಶದ 6 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಸಮಾಜವಾದಿ ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವುದು ಇದಕ್ಕೆ ತಾಜಾ ನಿದರ್ಶನ.
ಸೀಟು ಹಂಚಿಕೆ ವಿಚಾರವಾಗಿ ಸಮಾಜವಾದಿ ಪಕ್ಷದೊಂದಿಗೆ ಕಾಂಗ್ರೆಸ್ ಮಾತುಕತೆ ನಡೆಸುತ್ತಿದೆ. ತನಗೆ ಐದು ಸೀಟುಗಳನ್ನು ಬಿಟ್ಟುಕೊಡಬೇಕು ಎಂಬ ಬೇಡಿಕೆಯನ್ನೂ ಮಂಡಿಸಿದೆ. ಇದರ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಎಎಪಿ ಟೀಕೆ: ಮತ್ತೊಂದು ಮಿತ್ರ ಪಕ್ಷವಾದ ಆಮ್ ಆದ್ಮಿ ಪಕ್ಷ (ಎಎಪಿ) ಕೂಡ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದು, 'ಅತಿಯಾದ ವಿಶ್ವಾಸ'ವೇ ಕಾಂಗ್ರೆಸ್‌ಗೆ ಹಿನ್ನಡೆಯಾಗಲು ಕಾರಣ ಎಂದಿದೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತಾನು ಸಮರ್ಥ ಎಂದು ಹೇಳುವ ಮೂಲಕ, ಕಾಂಗ್ರೆಸ್ ಸಖ್ಯ ಅಗತ್ಯವಿಲ್ಲ ಎಂಬ ಸಂದೇಶವನ್ನೂ ಎಎಪಿ ರವಾನಿಸಿದೆ.
ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ, 10 ಸೀಟುಗಳಿಗೆ ಎಎಪಿ ಬೇಡಿಕೆ ಮುಂದಿಟ್ಟಿತ್ತು. ಏಳು ಸೀಟು ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ಇದಕ್ಕೆ ಒಪ್ಪಿಕೊಳ್ಳದ ಎಎಪಿ, ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು.
'ಎಲ್ಲಿ ತಪ್ಪಾಗಿದೆ ಎಂಬ ಬಗ್ಗೆ ಕಾಂಗ್ರೆಸ್ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದು ನ್ಯಾಷನಲ್ ಕಾಂಗ್ರೆಸ್‌ನ ಒಮರ್ ಅಬ್ದುಲ್ಲಾ ಹಾಗೂ ಶಿವಸೇನಾ (ಯುಬಿಟಿ) ಮುಖಂಡ ಸಂಜಯ್ ರಾವುತ್ ಹೇಳಿದ್ದಾರೆ.
'ಜಾತಿ ಗಣತಿ ಹಾಗೂ ಕುತಂತ್ರದಿಂದ ಕೂಡಿದ ಕೋಮುವಾದಿ ಪ್ರಚಾರ'ದಂತಹ ವಿಷಯಗಳ ಆಚೆಗೂ ಇರುವ ಇತರ ಸಂಗತಿಗಳ ಬಗ್ಗೆ ಆತ್ಮಾವಲೋಕನ ನಡೆಸುವಂತೆ ಕಾಂಗ್ರೆಸ್ ಪಕ್ಷಕ್ಕೆ ಸಿಪಿಎಂ ಕಿವಿಮಾತು ಹೇಳಿದೆ.
'ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಸಾಧನೆ ಮಾಡಿದೆ ಎಂಬುದು ಭ್ರಮೆಯಷ್ಟೆ. ಬಿಜೆಪಿ ವಿರುದ್ಧ ನೇರ ಹಣಾಹಣಿ ಇದ್ದಲ್ಲಿ ಕಾಂಗ್ರೆಸ್ ಸೋಲುವುದು ನಿಶ್ಚಿತ' ಎಂದು 'ಇಂಡಿಯಾ'ದ ಕೆಲ ಮಿತ್ರಪಕ್ಷಗಳು ದೂರಿವೆ.