ಬದಿಯಡ್ಕ : ದೇಹದಲ್ಲಿ ಶಕ್ತಿ ಇರುವ ತನಕ ಸಮಾಜದ ಕೆಲಸ ಮಾಡಬೇಕು.ಸ್ಥಳೀಯ ಕ್ಷೇತ್ರಗಳು ಇದಕ್ಕೆ ಸೂಕ್ತ ಸರ್ವಶ್ರೇಷ್ಠ ಜಾಗಗಳು.ಮಹಿಳಾ ಶಕ್ತಿಯು ಸಂಪನ್ನವಾದಾಗ ಅಭೂತಪೂರ್ವ ಸಕಾರಾತ್ಮಕ ಬದಲಾವಣೆಗಳಾಗುತ್ತವೆ.ಮುಂದಿನ ತಲೆಮಾರಿಗೂ ತಲುಪುತ್ತದೆ ಎಂದು ವಸಂತಿ ಟೀಚರ್ ಅಗಲ್ಪಾಡಿ ತಿಳಿಸಿದರು.
ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ 25ರ ಸಂದರ್ಭದಲ್ಲಿ ನಡೆದ ಶಿವಾರ್ಪಣಂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಾಂಕೇತಿಕವಾಗಿ ಬಟ್ಟೆಯ ಹೂವಿನ ಹಾರ ಮಾಡುವುದರ ಮೂಲಕ ಚಾಲನೆ ನೀಡಿದರು.ಹಿಂದೆ ರಜಾ ದಿನಗಳನೆಲ್ಲಾ ಸಮಾಜ ಸೇವೆಗೆ ಮೀಸಲಿಟ್ಟ ದಿನಗಳನ್ನು ಸ್ಮರಿಸಿದರು.
ಬ್ರಹ್ಮಕಲಶೋತ್ಸವದಲ್ಲಿ ಸರ್ವಾಂಗವಾಗಿ ಸೇವೆ ಮಾಡಿದಾಗ ಮೂಡುವ ಧನ್ಯತಾಭಾವ ಬೇರೆಲ್ಲೂ ಸಿಗದು.ಪರಿಸರ ಸ್ನೇಹಿಯಾದ 'ಶಿವಾರ್ಪಣಂ ' ಯೋಜನೆಯನ್ನು ಈ ಬ್ರಹ್ಮಕಲಶೋತ್ಸವಕ್ಕೆ ಜೋಡಿಸಿದ್ದು ಜನಪ್ರಿಯವಾಗಿದೆ. ಪಾರಂಪರಿಕ ಕೌಶಲ್ಯಗಳಿಗೆ ಒತ್ತು ನೀಡುವ ಯೋಜನೆಯಲ್ಲಿ ಭಕ್ತಾದಿಗಳು ತೊಡಗಿಸಿಕೊಳ್ಳಬೇಕು ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಡಾ.ವೇಣುಗೋಪಾಲ ಕಳೆಯತ್ತೋಡಿ ದಿಕ್ಸೂಚಿ ಭಾಷಣದಲ್ಲಿ ತಿಳಿಸಿದರು.
ಕಾರ್ಯಗಾರದಲ್ಲಿ ಬಟ್ಟೆಯ ಹೂ ಮಾಲೆ ಮತ್ತು ಚೀಲ ತಯಾರಿ ಕುರಿತು ಈಶ್ವರೀ ಬೇರ್ಕಡವು, ತರಕಾರಿ ಕೃಷಿ ಕುರಿತು ದೇರಣ್ಣ ರೈ ಪುತ್ರಕಳ, ತೆಂಗಿನ ಗರಿ ಹೆಣೆಯುವುದು, ದೇಸೀ ದನದ ಸೆಗಣಿಯ ಬೆರಣಿ ತಯಾರಿಯ ಕುರಿತು ಕಾವೇರಿ ಎತ್ತರ ಅವರು ಪ್ರಾತ್ಯಕ್ಷಿಕೆ ನೀಡಿ ವಿಚಾರ ವಿನಿಮಯ ನಡೆಸಿದರು.
ಜಿಲ್ಲಾ ಪಂಚಾಯತಿ ಸದಸ್ಯೆ ಶೈಲಜಾ ನಡುಮನೆ ಶುಭಾಶಂಸನೆಗೈದರು.ಕಾರ್ಯದರ್ಶಿ ಡಾ.ಪ್ರಕಾಶ ವೈ.ಎಚ್ ಹಾಗೂ ಖಜಾಂಜಿ ವೈ.ವಿ.ಸುಬ್ರಹ್ಮಣ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆನೆಪ್ಪಳ್ಳ ಲತಾ ಮತ್ತು ತಂಡದವರು ಪ್ರಾರ್ಥನೆ ಮಾಡಿದರು. ಗೌರಿ ಕೆ ಎಸ್ ಸ್ವಾಗತಿಸಿ, ಡಾ.ವೈ.ವಿ.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿದರು. ವೈ.ವಿ.ರಮೇಶ ವಂದಿಸಿದರು.