ಕಾಸರಗೋಡು: ಕಾಞಂಗಾಡು ನಗರಸಭಾ ಅಧ್ಯಕ್ಷಗೆ ಚಪ್ಪಲಿ ಹಾರ ಹಾಕಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ನಕ್ಸಲ್ ನೇತಾರ, ನಕ್ಸಲ್ ಕಬಿನಿದಳ ಕಮಾಂಡರ್ ಕಲ್ಪೆಟ್ಟಾ ನಿವಾಸಿ ಸೋಮನ್‍ನನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಸಶಸ್ತ್ರದಳದೊಂದಿಗಿನ ಬಿಗಿ ಪೊಲೀಸ್ ಬಂದೋಬಸ್ತಿನೊಂದಿಗೆ ಈತನನ್ನು ಕರೆತರಲಾಗಿತ್ತು.
ಹೊಸದುರ್ಗ ನಗರಸಭಾ ಈ ಹಿಂದಿನ ಅಧ್ಯಕ್ಷರಾಗಿದ್ದ ವಕೀಲ ಎಸ್.ಪಿ ಖಾಲಿದ್ ಅವರ ಕಚೇರಿಗೆ 2007ರಲ್ಲಿ ಅಕ್ರಮವಾಗಿ ನುಗ್ಗಿ, ಕತ್ತಿಗೆ ಚಪ್ಪಲಿ ಹಾರ ಹಾಕಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಾನಕ್ಕೆ ಅನುಮತಿ ನೀಡಿರುವುದಾಗಿ ಆರೋಪಿಸಿ ಅಂದು ಸೋಮನ್ ನೇತೃತ್ವದ ತಂಡ ಕೃತ್ಯವೆಸಗಿದ ನಂತರ ತಲೆಮರೆಸಿಕೊಂಡಿತ್ತು.
ನಕ್ಸಲ್ ನೇತಾರ ಸೋಮನ್‍ಗಾಗಿ ಹುಡುಕಾಟ ನಡೆಸುತ್ತಿದ್ದ ನಕ್ಸಲ್ ನಿಗ್ರಹ ಪಡೆ 2024 ಜುಲೈ 28ರಂದು ಶೋರ್ನೂರ್ ರೈಲ್ವೆ ನಿಲ್ದಾಣ ವಠಾರದಿಂದ ಬಧಿಸಿ ವೀಯೂರ್ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗಬಂಧನದಲ್ಲಿರಿಸಿತ್ತು. ಈತನ ವಿರುದ್ಧ ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ಮಲಪ್ಪುರಂ, ಪಾಲಕ್ಕಾಡ್ ಠಾಣೆಗಳಲ್ಲೂ ನಕ್ಸಲ್ ಚಟುವಟಿಕೆಗೆ ಸಂಬಂಧಿಸಿ ಕೇಸು ದಆಖಲಾಗಿದೆ.