ಕಾಸರಗೋಡು: ಭೂಸುಧಾರಣೆ ಮತ್ತು ಕೃಷಿ ಸಂಬಂಧ ಕಾಯ್ದೆ ಜಾರಿಯಾದ ದಶಕಗಳ ನಂತರವೂ ಕೇರಳದಲ್ಲಿ ನಡೆಯುತ್ತಿರುವ ಜಮೀನ್ದಾರಿ ಮತ್ತು ಒಕ್ಕಲು ಸಂಪ್ರದಾಯ ಸಂಪೂರ್ಣವಾಗಿ ಕೊನೆಗಾಣಿಸಲು ಸರ್ಕಾರ ಬದ್ಧವಾಗಿದೆ ಎಂಬುದಾಗಿ ಕಂದಾಯ ಮತ್ತು ವಸತಿ ಖಾತೆ ಸಚಿವ ಕೆ.ರಾಜನ್ ತಿಳಿಸಿದ್ದಾರೆ.
ಅವರು ಕಾಸರಗೋಡು ನಗರಸಭಾ ಪುರಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಹಕ್ಕುಪತ್ರ ವಿತರಣಾ ಮೇಳದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಜನವರಿ 2026ರ ಮೊದಲು ಕೇರಳವನ್ನು ಒಕ್ಕಲು ಪ್ರಕರಣಗಳಿಂದ ಮುಕ್ತಗೊಳಿಸಿದ ದೇಶದ ಮೊದಲ ರಾಜ್ಯ ಎಂದು ಘೋಷಿಸಲಾಗುವುದು. ಒಂದೂವರೆ ವರ್ಷದೊಳಗೆ ನಿಯೋಜಿತ ಬಂಜರುಭೂಮಿ(ಎಡಬ್ಲ್ಯುಎಲ್) ಸಮಸ್ಯೆಯನ್ನು ಪರಿಹರಿಸಲಾಗುವುದು. ಕಾಸರಗೋಡು ಜಿಲ್ಲೆಯಲ್ಲಿ ನಿಯೋಜಿತ ಬಂಜರು ಭೂಮಿಯನ್ನು ಪರಿಶೀಲಿಸಲು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡವನ್ನು ನೇಮಿಸಲಾಗಿದೆ. ಎಡಬ್ಲ್ಯುಎಲ್ ಸಮಸ್ಯೆಗೆ ಒಂದೂವರೆ ವರ್ಷದೊಳಗೆ ಜಿಲ್ಲಾಡಳಿತ ಸಂಪೂರ್ಣ ಪರಿಹಾರ ಕಾಣಲಿದೆ.
ಕಾಯ್ದಿರಿಸಿದ ಭೂಮಿಯನ್ನು ಅರ್ಹರಿಗೆ ಮಂಜೂರು ಮಾಡಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ. ಪಂಚಾಯಿತಿ ಕಾರ್ಯದರ್ಶಿ ಹಾಗೂ ಸ್ಥಳೀಯಾಡಳಿತ ಇಲಾಖೆ ಹೆಚ್ಚುವರಿ ನಿರ್ದೇಶಕರ ವರದಿ ಆಧರಿಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ. ಇದರ ಪ್ರಕಾರ ರಾಜ್ಯದಲ್ಲಿ 6 ತಿಂಗಳೊಳಗೆ 2ಸಾವಿರ ಜನರಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗಲಿರುವುದಾಗಿ ತಿಳಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ 671 ಕಾರ್ಡ್‍ಗಳನ್ನು ನೀಡಲು ಯೋಜನೆಯಿಸಲಾಗಿದ್ದರೂ, ಇಲ್ಲಿ 906 ಕಾರ್ಡ್‍ಗಳನ್ನು ವಿತರಿಸಲು ಸಾಧ್ಯವಾಗಿದೆ. ಈ ಮಹತ್ವದ ಕಾರ್ಯಗಳಿಗೆ ಜಿಲ್ಲಾಧಿಕಾರಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರ ಕಾರಣವಾಗಿದೆ ಎಂದು ಸಚಿವರು ತಿಳಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಇ. ಚಂದ್ರಶೇಖರನ್, ಸಿ.ಎಚ್.ಕುಞಂಬು, ಎಂ. ರಾಜಗೋಪಾಲನ್, ಎಕೆಎಂ ಅಶ್ರಫ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷಧ್ಯಕ್ಷ ಶಾನವಾಸ್ ಪಾದೂರು, ಅಪರ ಜಿಲ್ಲಾಧಿಕಾರಿ ಪ್ರತೀಕ್ ಜೈನ್, ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ, ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸಿ.ಎ.ಸೈಮಾ, ನಗರಸಭಾ ವಾರ್ಡ್ ಕೌನ್ಸಿಲರ್ ವಿಮಲಾ ಶ್ರೀಧರನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸ್ವಾಗತಿಸಿದರು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಅಖಿಲ್ ವಂದಿಸಿದರು.