ನವದೆಹಲಿ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ತಂಡದಿಂದ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಹಾಸ್ಯನಟ ಮುನವ್ವರ್ ಫಾರೂಕಿ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ನವದೆಹಲಿ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ತಂಡದಿಂದ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಹಾಸ್ಯನಟ ಮುನವ್ವರ್ ಫಾರೂಕಿ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಎನ್‌ಸಿಪಿ (ಅಜಿತ್ ಪವಾರ ಬಣ) ನಾಯಕ, ಮಾಜಿ ಸಚಿವ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣದ ಆರೋಪಿಗಳ ವಿಚಾರಣೆ ವೇಳೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ತಂಡದಿಂದ ಮುನವ್ವರ್ ಫಾರೂಕಿ ಅವರಿಗೂ ಬೆದರಿಕೆ ಇರುವ ಸಂಗತಿ ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿಂದೂ ದೇವತೆಗಳ ಅವಹೇಳನ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಹಿನ್ನೆಲೆಯಲ್ಲಿ ಮುನವ್ವರ್ ಫಾರೂಕಿ ವಿರುದ್ಧ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ತಂಡದವರು ತೀವ್ರ ಆಕ್ರೋಶಗೊಂಡಿದ್ದಾರೆ. ಹಾಗಾಗಿ ಮುನವ್ವರ್ ಫಾರೂಕಿ ಹಾಗೂ ಅವರ ಕುಟುಂಬಸ್ಥರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಎಚ್ಚರಿಕೆ ವಹಿಸುವಂತೆಯೂ ಸೂಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮುನವ್ವರ್ ಫಾರೂಕಿ ಅವರು ಸದ್ಯ ಅಬುಧಾಬಿ ಪ್ರವಾಸದಲ್ಲಿದ್ದು, ಅವರು ಭಾರತಕ್ಕೆ ವಾಪಸ್ ಆದ ಕೂಡಲೇ ಭದ್ರತೆ ಕುರಿತು ಚರ್ಚಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2022ರಲ್ಲಿ ಮಧ್ಯಪ್ರದೇಶದ ಇಂದೋರ್‌ನ ಮುನ್ರೋ ಕೆಫೆಯಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಮುನವ್ವರ್, ಧರ್ಮ, ದೇವತೆಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಸಂಬಂಧ ಅವರನ್ನು ಬಂಧಿಸಲಾಗಿತ್ತು. 37 ದಿನ ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಹೊರಬಂದಿದ್ದರು. ಇದಾದ ನಂತರ, ಹಲವೆಡೆ ಅವರ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿತ್ತು.