ಬದಿಯಡ್ಕ : ಡಿವೈಎಫ್‍ಐ ಕಾಸರಗೋಡು ಜಿಲ್ಲಾ ಸಮಿತಿ ಮಾಜಿ ಮಹಿಳಾ ನೇತಾರೆ, ಸಚಿತಾ ರೈ ಮೇಲೆ ವಂಚನೆಯ ಮತ್ತಷ್ಟು ಕೇಸು ದಾಖಲಾಗುತ್ತಿದೆ. ಪೆರ್ಲ ಸನಿಹದ ಬಳ್ಳಂಬೆಟ್ಟು ಹಾಗೂ ಬಾಡೂರು ನಿವಾಸಿಗಳಿಬ್ಬರು ನೀಡಿದ ಎರಡು ಪ್ರತ್ಯೇಕ ದೂರಿನ ಹಿನ್ನೆಲೆಯಲ್ಲಿ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬಾಡೂರು ನಿವಾಸಿ ಸಂಕಪ್ಪ ಪೂಜಾರಿ ಎಂಬವರ ಪುತ್ರ ಮಲ್ಲೇಶ್ ಹಾಗೂ ಪಳ್ಳತ್ತಡ್ಕ ಸನಿಹದ ಬಳ್ಳಂಬೆಟ್ಟು ನಿವಾಸಿ ಶ್ವೇತಾ ಎಂಬವರ ದೂರಿನ ಮೇರೆಗೆ ಈ ಕೇಸು. ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಕೆಲಸ ಕೊಡಿಸುವ ಭರವಸೆಯೊಂದಿಗೆ ಸಚಿತಾ ರೈ ಎರಡುವರೆ ಲಕ್ಷ ರೂ. ಬೇಡಿಕೆಯಿರಿಸಿದ್ದು, ಇದರಲ್ಲಿ ಒಂದು ಲಕ್ಷ ರೂ. ಮುಂಗಡವಾಗಿ ಪಡೆದಿದ್ದು, ಕೆಲಸ ತೆಗೆಸಿಕೊಡದೆ, ಹಣವನ್ನೂ ವಾಪಾಸು ಮಾಡದೆ ವಂಚಿಸಿರುವುದಾಗಿ ಮಲ್ಲೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಕಾಸರಗೋಡು ವಿದ್ಯಾನಗರ ಕೇಂದ್ರೀಯ ವಿದ್ಯಾಲಯದಲ್ಲಿ ಉದ್ಯೋಗ ದೊರಕಿಸಿಕೊಡುವ ಭರವಸೆ ನೀಡಿ, ಎರಡುವರೆ ಲಕ್ಷ ರೂ. ಪಡೆದು ವಂಚಿಸಿರುವುದಾಗಿ ಪಳ್ಳತ್ತಡ್ಕ ಸನಿಹದ ಬಳ್ಳಂಬೆಟ್ಟು ನಿವಾಸಿ ಶ್ವೇತಾ ಅವರು ಬದಿಯಡ್ಕ ಠಾಣೆಗೆ ನೀಡಿದ ಇನ್ನೊಂದು ದೂರಿನಲ್ಲಿ ತಿಳಿಸಿದ್ದಾರೆ.
ಪುತ್ತಿಗೆ ಪಂಚಾಯಿತಿಯ ಬಾಡೂರು ಕಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಸಚಿತಾ ರೈ ಕೇಂದ್ರ ಸರ್ಕಾರದ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಡುವ ಭರವಸೆ ನೀಡಿ, ಬಡಜನತೆಯಿಂದ ಲಕ್ಷಾಂತರ ರೂ. ಪಡೆದು ವಂಚಿಸಿರುವ ಆರೋಪಿಯಾಗಿದ್ದಾಳೆ.