ನವದೆಹಲಿ: ಮಾರುಕಟ್ಟೆಯಲ್ಲಿ ಆದ ಬದಲಾವಣೆಗೆ ಹೊಂದಿಕೊಳ್ಳದ ಕಂಪನಿಯಂತೆಯೇ ವಿಶ್ವಸಂಸ್ಥೆ ಕೂಡ ಕಾಣುತ್ತಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಟೀಕಿಸಿದರು.
ನವದೆಹಲಿ: ಮಾರುಕಟ್ಟೆಯಲ್ಲಿ ಆದ ಬದಲಾವಣೆಗೆ ಹೊಂದಿಕೊಳ್ಳದ ಕಂಪನಿಯಂತೆಯೇ ವಿಶ್ವಸಂಸ್ಥೆ ಕೂಡ ಕಾಣುತ್ತಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಟೀಕಿಸಿದರು.
ವಿಶ್ವಸಂಸ್ಥೆಯ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡಿದ ಅವರು, ಮಾರುಕಟ್ಟೆಯ ಜೊತೆಯಲ್ಲೇ ಬದಲಾವಣೆ ಕಾಣದೆ ಇದ್ದರೂ ಬಹಳ ದೊಡ್ಡದಾದ ಸ್ಥಾನವನ್ನು ಪಡೆದ ಕಂಪನಿಯಂತೆ ವಿಶ್ವಸಂಸ್ಥೆ ಇದೆ ಎಂದು ಹೇಳಿದರು.
'ಕೌಟಿಲ್ಯ ಅರ್ಥಶಾಸ್ತ್ರ ಸಮಾವೇಶ'ದಲ್ಲಿ ಮಾತನಾಡಿದ ಅವರು, 'ಜಗತ್ತಿನಲ್ಲಿ ಎರಡು ಗಂಭೀರ ಸಂಘರ್ಷಗಳು ನಡೆಯುತ್ತಿದ್ದರೂ ಅವರ ಪಾಲಿಗೆ ವಿಶ್ವಸಂಸ್ಥೆ ಎಲ್ಲಿದೆ? ಅದು ಪಕ್ಕದಲ್ಲಿ ನಿಂತು ನೋಡುವವರ ರೀತಿಯಲ್ಲಿ ಇದೆ' ಎಂದು ಹೇಳಿದರು. 'ಜಗತ್ತು ಮತ್ತು ಭಾರತ' ಎಂಬ ವಿಷಯದ ಕುರಿತ ಸಂವಾದದಲ್ಲಿ ಜೈಶಂಕರ್ ಮಾತನಾಡಿದರು.
ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗದಲ್ಲಿ ಭಾಗಿಯಾಗಲು ಪಾಕಿಸ್ತಾನಕ್ಕೆ ತೆರಳುತ್ತಿರುವುದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಾಕಿಸ್ತಾನದ ಜೊತೆ ದ್ವಿಪಕ್ಷೀಯ ಮಾತುಕತೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
'ಪ್ರಮುಖ ಸಂಗತಿಗಳ ವಿಚಾರವಾಗಿ ವಿಶ್ವಸಂಸ್ಥೆಯು ಹೆಚ್ಚು ಕೆಲಸಗಳನ್ನು ಮಾಡದೆ ಇದ್ದಾಗ, ದೇಶಗಳು ತಮ್ಮದೇ ಆದ ಮಾರ್ಗ ಕಂಡುಕೊಳ್ಳುತ್ತವೆ. ಉದಾಹರಣೆಗೆ, ಕಳೆದ ಐದು ಅಥವಾ 10 ವರ್ಷಗಳನ್ನು ಪರಿಗಣಿಸೋಣ. ನಮ್ಮ ಜೀವನದಲ್ಲಿ ನಡೆದ ಅತಿದೊಡ್ಡ ಘಟನೆಯೆಂದರೆ ಕೋವಿಡ್. ವಿಶ್ವಸಂಸ್ಥೆಯು ಕೋವಿಡ್ ವಿಚಾರದಲ್ಲಿ ಏನು ಮಾಡಿತು? ಅದು ಹೆಚ್ಚೇನೂ ಕೆಲಸ ಮಾಡಲಿಲ್ಲ' ಎಂದು ಹೇಳಿದರು.