ಅಡುಗೆ ಮನೆಯಲ್ಲಿ ಯಾವುದಾದರು ವಸ್ತು ಹಾಳಾಗುತ್ತಲೇ ಇರುತ್ತೆ. ಇಲ್ಲವೆ ಗೃಹಿಣಿಯರಿಗೆ ತಲೆ ನೋವು ತರುತ್ತಲೆ ಇರುತ್ತೆ. ಕೆಲವೊಮ್ಮೆ ದಿನಸಿ ವಸ್ತುಗಳು ಖಾಲಿಯಾಗುವುದು, ಇಲ್ಲವೆ ಹಾಳಾಗುವುದು ಆಗುತ್ತಿರುತ್ತೆ. ಅದರಲ್ಲಿ ಹೆಚ್ಚಾಗಿ ಹಿಟ್ಟುಗಳು, ತರಕಾರಿ, ಮಸಾಲೆ ಪದಾರ್ಥಗಳು ಬೇಗ ಹಾಳಾಗುವುದನ್ನು ನಾವು ನೋಡಿದ್ದೇವೆ.
ಆಗಾಗ ಅಡುಗೆಗೆ ಬಳಸುವ ವಸ್ತುಗಳನ್ನು ಬಳಸುವಾಗ ಹಾಳಾಗಿರುವುದನ್ನು ನೋಡುತ್ತೇವೆ. ಹಾಗೆ ಕೆಲವೊಂದು ಬಾರಿ ನಾವು ಬಳಸುವ ಉಪ್ಪು ನೀರಾಗುವುದನ್ನು ಕೂಡ ನೋಡಿರುತ್ತೇವೆ. ನೀವು ಪುಡಿ ಉಪ್ಪು ಬಳಸುತ್ತಿದ್ದರೆ ಅದು ತೇವಾಂಶದಿಂದ ಕೂಡಿ ನೀರಾಗಿರುತ್ತೆ. ಹಾಗೆ ಕಲ್ಲು ಉಪ್ಪು ನೀರು ಬಿಟ್ಟುಕೊಳ್ಳುತ್ತದೆ.
ಹಾಗಾದ್ರೆ ಈ ಸಮಸ್ಯೆಯಿಂದ ಹೊರಬರುವುದು ಹೇಗೆ? ಉಪ್ಪು ತೇವಾಂಶದಿಂದ ಕೂಡುವುದನ್ನು ತಡೆಯುವುದು ಹೇಗೆ? ನೀವು ಉಪ್ಪು ಹಾಕಿಕೊಳ್ಳಲು ಹೋದಾಗ ತೇವಾಂಶದಿಂದ ಕೂಡಿರುತ್ತೆ, ಹಾಗೆ ಹುಡಿ ಹುಡಿ ಆಗಿರದೆ ಅಡುಗೆಗೆ ಬಳಸುವಾಗ ಅಳತೆಯೂ ತಪ್ಪಲಿದೆ. ಹಾಗಾದ್ರೆ ಉಪ್ಪು ತೇವಾಂಶ ಭರಿತ ಆಗುವುದು ಏಕೆ? ತಪ್ಪಿಸುವುದು ಹೇಗೆ ಎಂಬುದನ್ನು ನಾವಿಂದು ನೋಡೋಣ.
ಅಕ್ಕಿ ಹಾಗೂ ಕಾಫಿ ಬೀಜ
ನೀವು ಯಾವುದಾದರು ಡಬ್ಬಿಯಲ್ಲಿ ಉಪ್ಪು ಹಾಕಿಟ್ಟಿದ್ದರೆ ಅದು ತೇವ ಹೀರಿಕೊಡಿರುತ್ತದೆ. ಹೀಗಾಗಿ ಡಬ್ಬಿಯಿಂದ ಉಪ್ಪು ಬೀಳುವುದೇ ಇಲ್ಲ. ಆದ್ರೆ ಇದೇ ಡಬ್ಬಿಗೆ ನಾವು ಸ್ವಲ್ಪ ಅಕ್ಕಿ ಕಾಳು ಅಥವಾ ಕಾಫಿ ಬೀಜ ಇದ್ದರೆ ಅದನ್ನು ಹಾಕಿಡಬೇಕು. ಆದ್ರೆ ಉಪ್ಪು ಬಳಸುವಾಗ ಅಕ್ಕಿ ಮತ್ತು ಕಾಫಿ ಬೀಜಗಳು ಅಡುಗೆಗೆ ಬೀಳದಂತೆ ನೋಡಿಕೊಂಡರೆ ಆಯಿತು. ಆದ್ರೆ ಡಬ್ಬಿಯಲ್ಲಿ ಉಪ್ಪು ಯಾವಗಲು ಹುಡಿ ಹುಡಿಯಾಗಿರುತ್ತೆ.
ಲವಂಗ
ಉಪ್ಪು ನೀರು ಬಿಡುವುದನ್ನು ತಡೆಯಲು ಒಂದೆರಡು ಲವಂಗವನ್ನು ಉಪ್ಪಿನ ಡಬ್ಬಿಗೆ ಹಾಕಿ ಇಡಬೇಕು. ಇದು ತೇವಾಂಶವನ್ನು ಹೀರಿಕೊಳ್ಳುತ್ತದೆ. ಆದ್ರೆ ಲವಂಗದ ಪರಿಮಳ ನಿಮಗೆ ಇಷ್ಟವಾಗುವುದಾದರೆ ಮಾತ್ರ ಲವಂಗ ಹಾಕಿ. ಏಕೆಂದರೆ ಉಪ್ಪಿಗೆ ಲವಂಗ ಹಾಕಿದರೆ ಉಪ್ಪು ಅದೇ ರೀತಿಯ ಸುವಾಸನೆಯಿಂದ ಕೂಡಿರುತ್ತದೆ.
ಪ್ಲಾಸ್ಟಿಕ್ ಬದಲಿಗೆ ಗಾಜು
ಹಲವರ ಮನೆಯಲ್ಲಿ ಪ್ಲಾಸ್ಟಿಕ್ ಡಬ್ಬಿಯಲ್ಲಿ ಉಪ್ಪನ್ನು ತುಂಬಿಸಿಡುತ್ತಾರೆ, ಅದಕ್ಕಿಂತ ಗಾಜಿನ ಡಬ್ಬಿ ಅಥವಾ ಪಿಂಗಾಣಿಯಂತಹ ಸಣ್ಣ ಡಬ್ಬಿಯಲ್ಲಿ ಹಾಕಿ ಇಟ್ಟರೆ ಉಪ್ಪು ತೇವಾಂಶ ಹೀರಿಕೊಳ್ಳುವುದಿಲ್ಲ. ಹಾಗೆ ಅದರ ಮುಚ್ಚಳ ಕೂಡ ಗಟ್ಟಿಯಾಗಿ ಹಾಕಿದರೆ ಹೆಚ್ಚು ತೇವಾಂಶ ಹೀರುವುದಿಲ್ಲ.
ಬಿಸಿಯಾದ ಜಾಗದಲ್ಲಿ ಇಡುವುದು
ಉಪ್ಪು ನೀರಾಗಲು ಹಾಗೂ ತೇವಾಂಶ ಹೀರಿಕೊಳ್ಳಲು ತಣ್ಣನೆಯ ವಾತಾವರಣೆ ಕಾರಣವಾಗಿರುತ್ತದೆ. ಹೀಗಾಗಿ ಉಪ್ಪನ್ನು ನೀವು ತೇವ ಭರಿತ ಜಾಗದಿಂದ ಬದಲಾಯಿಸಿ. ಆದಷ್ಟು ಗ್ಯಾಸ್ ಸ್ಟೌವ್‌ನ ಹತ್ತಿರದಲ್ಲಿ ಇಡಿ. ಇಲ್ಲವೆ ಗಾಳಿ ಹೆಚ್ಚಾಗಿ ಬಾರದಂತಹ ಜಾಗದಲ್ಲಿ ಉಪ್ಪನ್ನು ಇಟ್ಟು ನೋಡಿ. ಉಪ್ಪನ್ನು ಮರದ ಬಾಕ್ಸ್‌ನಲ್ಲಿ ಇಡಬೇಡಿ.
ನೀರಿನ ಕೈಯಿಂದ ಉಪ್ಪು ಮುಟ್ಟಬೇಡಿ
ಮನೆಯಲ್ಲಿ ನೀರು ಮುಟ್ಟಿ ನಂತರ ಉಪ್ಪಿನ ಡಬ್ಬಿ ಮುಟ್ಟಬೇಡಿ. ಹಾಗೆ ಮನೆ ಸ್ವಚ್ಛ ಮಾಡಿದ ಬಳಿಕ ಅಥವಾ ನೀರಿನಿಂದ ಒರೆಸಿದ ಬಳಿಕ ಆ ಜಾಗದಲ್ಲಿ ನೀರು ಇದ್ದರೆ ಅಲ್ಲಿ ಉಪ್ಪುಬೇಡಿ, ಇದರಿಂದ ಉಪ್ಪು ಬಹುಬೇಗ ತೇವಾಂಶ ಹೀರಿಕೊಳ್ಳುತ್ತದೆ. ಹಾಗೆ ಒದ್ದೆಯಾಗಿರುವ ಬಟ್ಟೆ ಇಲ್ಲವೆ ಪಾತ್ರೆಯ ಬಳಿ ಉಪ್ಪಿನ ಡಬ್ಬಿಯನ್ನು ಇಡುವುದನ್ನು ತಪ್ಪಿಸಿ.