ಸ್ಟಾಕ್‌ಹೋಮ್: ಅರ್ಥಶಾಸ್ತ್ರ ವಿಭಾಗದಲ್ಲಿ ನೀಡುವ ಈ ಬಾರಿಯ ನೊಬೆಲ್ ಪುರಸ್ಕಾರಕ್ಕೆ ಡೆರಾನ್ ಆಶಿಮೊಗ್ಲೊ (57), ಸೈಮನ್ಸ್ ಜಾನ್ಸನ್ (61) ಹಾಗೂ ಜೇಮ್ಸ್ ಎ. ರಾಬಿನ್ಸನ್ (64) ಅವರನ್ನು ಆಯ್ಕೆ ಮಾಡಲಾಗಿದೆ. ಕೆಲವು ದೇಶಗಳು ಶ್ರೀಮಂತವಾಗಿಯೇ ಇರುವುದು ಮತ್ತು ಕೆಲವರು ಬಡವರಾಗಿಯೇ ಉಳಿಯುತ್ತಿರುವ ಕುರಿತು ಈ ಮೂವರು ಪ್ರಶಸ್ತಿ ಪುರಸ್ಕೃತರು ಸಂಶೋಧನೆ ನಡೆಸಿದ್ದಾರೆ.
ದೇಶಗಳ ನಡುವಿನ ಶ್ರೀಮಂತಿಕೆಯ ವ್ಯತ್ಯಾಸಕ್ಕೆ ಆಯಾ ದೇಶಗಳಲ್ಲಿನ ಸಾಮಾಜಿಕ ವ್ಯವಸ್ಥೆಗಳು (ಶಿಕ್ಷಣ, ಪೊಲೀಸ್, ಕುಟುಂಬ, ಕಾನೂನು, ಆರ್ಥಿಕ, ಸಾಮಾಜಿಕ, ರಾಜಕೀಯ ವ್ಯವಸ್ಥೆ ಮುಂತಾದವು) ಕಾರಣವಾಗುತ್ತವೆ' ಎನ್ನುವುದನ್ನು ತಮ್ಮ ಸಂಶೋಧನೆಗಳ ಮೂಲಕ ಈ ಮೂವರು ಅರ್ಥಶಾಸ್ತ್ರಜ್ಞರು ವಿವರಿಸಿದ್ದಾರೆ.
'ಸಾಮಾಜಿಕ ಸಂಸ್ಥೆಗಳು ಹೇಗೆ ದೇಶಗಳ ಸಮೃದ್ಧಿಯಲ್ಲಿ ಮುಖ್ಯಭೂಮಿಕೆ ವಹಿಸುತ್ತವೆ ಎನ್ನುವ ಕುರಿತ ಈ ಸಂಶೋಧನೆಯು ಈ ಕಾಲಘಟ್ಟದ ಜರೂರು' ಎಂದು ರಾಯಲ್ ಸ್ವೀಡಿಶ್ ಅಕಾಡೆಮಿ ತನ್ನ ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದೆ.
'ಯಾವುದೇ ಒಂದು ದೇಶದಲ್ಲಿ ಅರಾಜಕತೆ ಇದ್ದರೆ ಅಥವಾ ಒಂದು ದೇಶದ ಸಾಮಾಜಿಕ ವ್ಯವಸ್ಥೆಯು ಜನರನ್ನು ದೌರ್ಜನ್ಯಕ್ಕೆ ಒಳಪಡಿಸುತ್ತಿದ್ದರೆ ಅಂಥ ದೇಶಗಳು ಅಭಿವೃದ್ಧಿಯಿಂದ ಹಿಂದುಳಿಯುತ್ತವೆ' ಎಂದು ಸಂಶೋಧಕರು ವಿವರಿಸುತ್ತಾರೆ.
ಡೆರಾನ್ ಆಶಿಮೊಗ್ಲೊ ಹಾಗೂ ಸೈಮನ್ ಜಾನ್ಸ್‌ನ್ ಅವರು ಅಮೆರಿಕದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಮೆಸಾಚ್ಯೂಸೆಟ್ಸ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಜೇಮ್ಸ್ ಅವರು ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.