ಗಾಜಿಯಾಬಾದ್: ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್ ವಿರುದ್ಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಹರಡುವ ಹಾಗೂ ಇನ್ನಿತರ ಪ್ರಕರಣಗಳಡಿ ಗಾಜಿಯಾಬಾದ್ ಪೊಲೀಸರು ಎಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ವಿವಾದಿತ ಧರ್ಮಗುರು ಯತಿ ನರಸಿಂಗನಂದ ಅವರ ಆಪ್ತೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರವಾದಿ ಮುಹಮ್ಮದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ನರಸಿಂಗನಂದ ವಿರುದ್ಧ ಮುಸ್ಲಿಂ ಸಮುದಾಯದ ಹಲವು ಗುಂಪುಗಳು ಪ್ರತಿಭಟನೆ ನಡೆಸುತ್ತಿವೆ.
ನರಸಿಂಗನಂದ ಸರಸ್ವತಿ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಉದಿತ ತ್ಯಾಗಿ ಎನ್ನುವವರು ಕವಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನರಸಿಂಗನಂದರವರ ಹಳೆಯ ವಿಡಿಯೊವನ್ನು ಹಂಚಿಕೊಂಡು ಮುಸ್ಲಿಮರನ್ನು ನರಸಿಂಗನಂದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜುಬೇರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಯ ಸೆಕ್ಷನ್ 196 (ಎರಡು ಗುಂಪುಗಳ ನಡುವೆ ದ್ವೇಷ ಹರಡುವುದು), 225 (ತಪ್ಪು ಮಾಹಿತಿ ನೀಡುವುದು), 299 (ಧಾರ್ಮಿಕ ಭಾವನೆಗಳನ್ನು ಅವಮಾನಿಸುವ ಭಾವನೆಗಳನ್ನು ಕೆರಳಿಸುವುದು), 351 (2) (ಬೆದರಿಕೆ) ರ ಅಡಿ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ.