ನವದೆಹಲಿ: ನಮ್ಮ ದೇಶದ ಕುಶಲತೆ ಹೊಂದಿದ ಕಾರ್ಮಿಕರ ಕೊರತೆಯನ್ನು ನೀಗಿಸಲು ಭಾರತ ಸಹಾಯ ಮಾಡುತ್ತಿದೆ ಎಂದು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ಹೇಳಿದ್ದಾರೆ.
ನಗರದ ಗೋಥೆ ಇನ್‌ಸ್ಟಿಟ್ಯೂಟ್ ಹಾಗೂ ಮ್ಯಾಕ್ಸ್ ಮುಲ್ಲರ್ ಭವನದಲ್ಲಿ ಆಯೋಜಿಸಿದ್ದ ಭಾರತೀಯ ವಿದ್ಯಾರ್ಥಿಗಳ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
'ಯುವ ವಿದ್ಯಾವಂತ ಭಾರತೀಯರು ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ನಮ್ಮ ದೇಶದಲ್ಲಿ (ಜರ್ಮನಿ) ನುರಿತ ಕಾರ್ಮಿಕರ ಅವಶ್ಯಕತೆ ಇದೆ. ಹಾಗಾಗಿ ಪ್ರತಿಭಾವಂತ ಭಾರತೀಯರನ್ನು ಸ್ವಾಗತಿಸಲು ನಾವು ಸದಾ ಸಿದ್ಧರಿರುತ್ತೇವೆ' ಎಂದು ಹೇಳಿದ್ದಾರೆ.
'2022ರಲ್ಲಿ ಬರ್ಲಿನ್‌ನಲ್ಲಿ ನಡೆದಿದ್ದ ಸಮಾಲೋಚನೆಯಲ್ಲಿ ನಾವು ನಮ್ಮ ದ್ವಿಪಕ್ಷೀಯ ಸಹಕಾರಕ್ಕಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೆವು. ಈ ಎರಡು ವರ್ಷದ ಅವಧಿಯಲ್ಲಿ ನಮ್ಮ ಕಾರ್ಯತಂತ್ರದ ಸಂಬಂಧಗಳ ವಿವಿಧ ಕ್ಷೇತ್ರಗಳಲ್ಲಿ ಪ್ರೋತ್ಸಾಹದಾಯಕ ಪ್ರಗತಿ ಕಂಡುಬಂದಿದೆ' ಎಂದು ತಿಳಿಸಿದ್ದಾರೆ.
'ಜರ್ಮನಿಯಲ್ಲಿ ಕುಶಲತೆ ಹೊಂದಿದ ಕಾರ್ಮಿಕರ ಕೊರತೆಯಿದ್ದು, ಭಾರತದಿಂದ ಜರ್ಮನಿಗೆ ಬರುವ ಐ.ಟಿ. ತಂತ್ರಜ್ಞರಿಗೆ ಕೆಲಸದ ವೀಸಾಗಳನ್ನು ಪಡೆಯುವುದನ್ನು ನಮ್ಮ ಸರ್ಕಾರವು ಸುಲಭಗೊಳಿಸಿದೆ' ಎಂದು ಹೇಳಿದ್ದಾರೆ.
'ಸಾಫ್ಟ್‌ವೇರ್ ಡೆವಲಪರ್‌ಗಳಿಗೆ ಮತ್ತು ಐ.ಟಿ ಅಭಿವೃದ್ಧಿ ಕೌಶಲ ಹೊಂದಿರುವವರಿಗೆ ಜರ್ಮನಿಯು ಹೆಚ್ಚು ಆಕರ್ಷಕವಾಗಿದ್ದು, ಈ ನಿಟ್ಟಿನಲ್ಲಿ ಕಾನೂನು ಚೌಕಟ್ಟನ್ನು ಸುಧಾರಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ' ಎಂದೂ ಅವರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ದೆಹಲಿಯಲ್ಲಿ ನಡೆದ 7ನೇ ಭಾರತ-ಜರ್ಮನಿ ಅಂತರ್ ಸರ್ಕಾರಿ ಸಮಾಲೋಚನೆ (ಐಜಿಸಿ) ಸಭೆಯಲ್ಲಿ ಅನ್ನಾಲೆನಾ ಬೇರ್ಬಾಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದರು. ಈ ವೇಳೆ ಜರ್ಮನಿಯ ಚಾನ್ಸಲರ್ ಓಲಾಫ್ ಶೋಲ್ಜ್ ಕೂಡ ಉಪಸ್ಥಿತರಿದ್ದರು.