ಬೈರೂತ್: ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ದಕ್ಷಿಣ ಲೆಬನಾನ್‌ನ ಪಟ್ಟಣವಾದ ನಬಾತಿಹ್‌ನ ಮೇಯರ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ನಬಾತಿಹ್‌ನ ನಗರಸಭೆ ಕಟ್ಟಡದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೇಯರ್ ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಖಚಿತಪಡಿಸಿದೆ.
ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯಿಂದಾಗಿ ಮೂರು ವಾರಗಳಲ್ಲಿ 4 ಲಕ್ಷಕ್ಕೂ ಅಧಿಕ ಮಕ್ಕಳು ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಗ್ಯ ಸಚಿವಾಲಯದ ಪ್ರಕಾರ, ಲೆಬನಾನ್‌ನಲ್ಲಿ 2,300ಕ್ಕೂ ಹೆಚ್ಚು ಜನರು ಇಸ್ರೇಲ್ ದಾಳಿಯಿಂದ ಮೃತಪಟ್ಟಿದ್ದಾರೆ. ಮೂರು ವಾರಗಳಲ್ಲಿ 100ಕ್ಕೂ ಹೆಚ್ಚು ಮಕ್ಕಳು ಕೊನೆಯುಸಿರೆಳೆದಿದ್ದಾರೆ ಮತ್ತು 800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಗಾಜಾದಲ್ಲಿ ಹಮಾಸ್ ಬಂಡುಕೋರರ ವಿರುದ್ಧ ವರ್ಷದಿಂದ ಯುದ್ಧದಲ್ಲಿ ತೊಡಗಿರುವ ಇಸ್ರೇಲ್, ಸದ್ಯ ಲೆಬನಾನ್‌ನಲ್ಲೂ ಹಿಜ್ಬುಲ್ಲಾ ಬಂಡುಕೋರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸುವ ಜತೆಗೆ ಭೂ ಆಕ್ರಮಣವನ್ನು ಪ್ರಾರಂಭಿಸಿದೆ. ಇದರಿಂದ 12 ಲಕ್ಷ ಜನರು ಮನೆಗಳನ್ನು ತೊರೆದಿದ್ದಾರೆ. ಇವರಲ್ಲಿ ಹೆಚ್ಚಿನವರು ಬೈರೂತ್ ನಗರ ಮತ್ತು ಲೆಬನಾನ್‌ನ ಉತ್ತರ ಭಾಗದಿಂದ ಇತರೆಡೆಗೆ ಮೂರು ವಾರಗಳಲ್ಲಿ ಪಲಾಯನ ಮಾಡಿದ್ದಾರೆ.