ಕಾಸರಗೋಡು: ಅಬಕಾರಿ ದಳ ಸಿಬ್ಬಂದಿ ಜಿಲ್ಲೆಯ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮದ್ಯ, ಗಾಂಜಾ, ಅನಧಿಕೃತ ಮದ್ಯತಯಾರಿಸಲು ದಾಸ್ತಾನಿರಿಸಿದ್ದ ಹುಳಿರಸ ವಶಪಡಿಸಿಕೊಳ್ಳಲಾಗಿದೆ. ಬೇಳ ಸನಿಹದ ಸೀತಾಂಗೋಳಿಯಲ್ಲಿ ಕಾಸರಗೋಡು ಅಬಕಾರಿ ದಳ ಸಿಬ್ಬಂದಿ ನಡೆಸಿದ ಕಾಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 55ಗ್ರಾಂ ಗಾಂಜಾ ವಶಪಡಿಸಿಕೊಂಡು, ಉಳ್ಳೋಡಿ ನಿವಾಸಿ ಕೃತಿಗುರು ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಕಾಸರಗೋಡಿನ ಕರಂದಕ್ಕಾಡಿನ ಹಿತ್ತಿಲಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಹಿತ್ತಿಲಲ್ಲಿ ಅವಿತಿರಿಸಲಾಗಿದ್ದ 180 ಎಂ.ಎಲ್‍ನ 352ಪ್ಯಾಕೆಟ್(63.35ಲೀ.)ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ವಶಪಡಿಸಿಕೊಂಡಿದ್ದಾರೆ. ಆರೋಪಿ ಪತ್ತೆಯಾಗಿಲ್ಲ. ಮಧೂರು ಸನಿಹದ ಅರಂತೋಡಿನಲ್ಲಿ ಅಬಕಾರಿ ದಳ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ 7.02ಕಿ. ಗೋವಾ ನಿರ್ಮಿತ ವಿದೇಶಿ ಮದ್ಯ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಜೋಸೆಫ್ ಡಿ.ಸೋಜ ಎಂಬಾತನನ್ನು ಬಂಧಿಸಿದ್ದಾರೆ. ವೆಳ್ಳರಿಕುಂಡಿನ ಪಡಯಂಕಲ್ಲಿನಲ್ಲಿ ನೀಲೇಶ್ವರ ಅಬಕಾರಿ ದಳ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ 2ಲೀ. ಸಾರಾಯಿ ಹಾಗೂ ಕಳ್ಳಬಟ್ಟಿ ತಯಾರಿಗಾಗಿ ದಾಸ್ತಾನಿರಿಸಿದ್ದ 45ಲೀ. ಹುಳಿರಸ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.