ನವದೆಹಲಿ: ಭಾರತೀಯ ವಿಮಾನಯಾನ ಸಂಸ್ಥೆಗಳ ಸುಮಾರು 20ಕ್ಕೂ ಹೆಚ್ಚು ವಿಮಾನಗಳಿಗೆ ಇಂದು (ಶನಿವಾರ) ಬೆಳಿಗ್ಗೆಯಿಂದ ಬಾಂಬ್ ಬೆದರಿಕೆ ಕರೆಗಳು ಬಂದಿವೆ ಎಂದು ಶನಿವಾರ ವರದಿಯಾಗಿದೆ.
ಏರ್ ಇಂಡಿಯಾ, ಇಂಡಿಗೊ, ಆಕಾಶ ಏರ್, ವಿಸ್ತಾರಾ, ಸ್ಪೈಸ್ ಜೆಟ್, ಸ್ಟಾರ್ ಏರ್ ಮತ್ತು ಅಲಯನ್ಸ್ ಏರ್ ವಿಮಾನಗಳಿಗೆ ಬೆದರಿಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈನಿಂದ ಇಸ್ತಾನ್‌ಬುಲ್‌ಗೆ ತೆರಳುವ 6E 17 ವಿಮಾನ ಹಾಗೂ ದೆಹಲಿಯಿಂದ ಇಸ್ತಾನ್‌ಬುಲ್‌ಗೆ ಹೊರಡುವ 6E 11 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆಗಳನ್ನು ಸ್ವೀಕರಿಸಲಾಗಿದೆ ಎಂದು ಇಂಡಿಗೊ ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಜೋಧ್‌ಪುರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವಿಸ್ತಾರಾ ವಿಮಾನಕ್ಕೆ ಹಾಗೂ ಉದಯಪುರದಿಂದ ಮುಂಬೈಗೆ ಸಂಚಾರಿಸುತ್ತಿದ್ದ ಇಂಡಿಗೊ ವಿಮಾನಕ್ಕೆ ಬೆದರಿಕೆ ಹಾಕಲಾಗಿದ್ದು, ವಿಮಾನ ನಿಲ್ದಾಣಗಳಿಗೆ ತಲುಪಿದ ಬಳಿಕ ವಿಮಾನಗಳನ್ನು ಪ್ರತ್ಯೇಕ ಸ್ಥಳಗಳಿಗೆ ಕೊಂಡ್ಯೊಯ್ದು ತಪಾಸಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ವಿಮಾನಯಾನ ಸಂಸ್ಥೆಗಳು ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ವಿಮಾನಯಾನ ಸಂಸ್ಥೆಗಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶುಕ್ರವಾರ ವಿಸ್ತಾರಾದ ಮೂರು ಅಂತರರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು. ತಪಾಸಣೆಯ ಬಳಿಕ ಹುಸಿ ಬಾಂಬ್ ಬೆದರಿಕೆ ಎಂದು ತಿಳಿದು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆಲ ದಿನಗಳಿಂದ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸುಮಾರು 40ಕ್ಕೂ ಹೆಚ್ಚು ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ ಎಂದು ವರದಿಯಾಗಿದೆ.