ನವದೆಹಲಿ: ಇತ್ತೀಚೆಗೆ ನಡೆದ 'ಬ್ರಿಕ್ಸ್' ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಜಾರ್ಖಂಡ್ ಕಲಾಕೃತಿಯನ್ನು, ಇರಾನ್ ಮತ್ತು ಉಜ್ಬೇಕಿಸ್ತಾನ ಅಧ್ಯಕ್ಷರಿಗೆ ಮಹಾರಾಷ್ಟ್ರದ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಬ್ರಿಕ್ಸ್' ಶೃಂಗ ಸಭೆಯು ರಷ್ಯಾದ ಕಜಾನ್‌ನಲ್ಲಿ ಅಕ್ಟೋಬರ್ 22ರಿಂದ 24ರ ವರೆಗೆ ನಡೆದಿತ್ತು.
ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ 'ಸೊಹರಾಜ್' ಕಲಾಕೃತಿಯನ್ನು ಪುಟಿನ್ ಅವರಿಗೆ ಮೋದಿ ನೀಡಿದ್ದಾರೆ.
ಸೊಹರಾಜ್ ಚಿತ್ರಕಲೆಯು 'ಒಂದು ಜಿಲ್ಲೆ, ಒಂದು ಉತ್ಪನ್ನ' ಯೋಜನೆಯ ಉತ್ಪನ್ನವಾಗಿದೆ. ನೈಸರ್ಗಿಕ ವರ್ಣದ್ರವ್ಯಗಳು ಹಾಗೂ ಸರಳ ಸಲಕರಣೆಗಳನ್ನು ಬಳಸಿ ಈ ಕಲಾಕೃತಿಗಳನ್ನು ರಚಿಸಲಾಗುತ್ತದೆ. ಕಲಾವಿದರು ಒಣಹುಲ್ಲು ಅಥವಾ ಬೆರಳುಗಳನ್ನು ಬಳಸಿಯೇ ಈ ವಿಶಿಷ್ಟ ಕಲಾಕೃತಿಗಳನ್ನು ರಚಿಸುತ್ತಾರೆ. ಪ್ರಾಣಿ-ಪಕ್ಷಿಗಳು, ಪ್ರಕೃತಿಯ ಚಿತ್ರಪಟಗಳು ಬುಡಕಟ್ಟು ಸಮುದಾಯವು ನಿಸರ್ಗವನ್ನು ಆರಾಧಿಸುವ ಬಗೆಯನ್ನು ತೋರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರಿಗೆ 'ಮದರ್ ಆಫ್ ಪರ್ಲ್' ಚಿಪ್ಪಿನಿಂದ ಮಾಡಿದ ಹೂಕುಂಡವನ್ನು ನೀಡಿದ್ದಾರೆ. ಮಹಾರಾಷ್ಟ್ರ ಕರಾವಳಿಯ ಕುಶಲಕರ್ಮಿಗಳಿಂದ ಸಂಗ್ರಹಿಸಿದ ಈ ಹೂಕುಂಡವು ರಾಜ್ಯದ ಕರಕುಶಲತೆ ಮತ್ತು ಸ್ವಾಭಾವಿಕ ಸೌಂದರ್ಯದ ಪ್ರತೀಕವಾಗಿದೆ.
ಸಾಂಪ್ರದಾಯಿಕ 'ವರ್ಲಿ ಪೇಂಟಿಂಗ್' ಕಲಾಕೃತಿಯನ್ನು ಉಜ್ಬೇಕಿಸ್ತಾನ ಅಧ್ಯಕ್ಷ ಶವ್ಕತ್ ಮಿರ್ಜಿಯೋವ್ ಅವರಿಗೆ ನೀಡಿದ್ದಾರೆ. ಮಹಾರಾಷ್ಟ್ರದ 'ವರ್ಲಿ' ಬುಡಕಟ್ಟು ಸಮುದಾಯದ ಈ ವಿಶಿಷ್ಟ ಕಲೆಗೆ 5,000 ಸಾವಿರ ವರ್ಷಗಳ ಇತಿಹಾಸವಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.