HEALTH TIPS

Cyclone Dana: ಅಬ್ಬರಿಸಿದ ಚಂಡಮಾರುತ, ಭಾರಿ ಮಳೆ, 2 ಸಾವು

 ಕೋಲ್ಕತ್ತ/ ಭುವನೇಶ್ವರ: 'ಡಾನಾ' ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದರು.

ಒಡಿಶಾದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಝಿ ಸ್ಪಷ್ಟಪಡಿಸಿದರು.

ಪರಿಶೀಲನಾ ಸಭೆ ನಡೆಸಿದ ಮಮತಾ:

ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಲು ಸಿಬ್ಬಂದಿ ಸಚಿವಾಲಯದಲ್ಲಿಯೇ ಗುರುವಾರ ರಾತ್ರಿ ಕಳೆದ ಮಮತಾ ಅವರು, ಶುಕ್ರವಾರ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.

ನಂತರ ಚಂಡಮಾರುತದ ಅಬ್ಬರದಿಂದ ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ಸಾಮಗ್ರಿಗಳು ತಲುಪುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

'ಕೇಬಲ್‌ಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ. ಅಗತ್ಯಬಿದ್ದರೆ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರವು ನೆರವು ನೀಡಲಿದೆ' ಎಂದು ಅವರು ತಿಳಿಸಿದರು.

ಚುರುಕು ಪರಿಹಾರ ಕಾರ್ಯ- ಮಾಝಿ

ಒಡಿಶಾ ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಝಿ ಅವರು ಭುವನೇಶ್ವರದಲ್ಲಿ ಶುಕ್ರವಾರ ಪರಿಸ್ಥಿತಿಯನ್ನು ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮರಗಳು ಧರೆಗುರುಳಿದ ಪರಿಣಾಮ ರಸ್ತೆಗಳು ಬಂದ್‌ ಆಗಿವೆ. ರಕ್ಷಣಾ ಪಡೆಯ ಸಿಬ್ಬಂದಿ ಈಗಾಗಲೇ ತೆರವು ಕಾರ್ಯ ಆರಂಭಿಸಿದ್ದಾರೆ' ಎಂದರು.

'ವಿದ್ಯುತ್‌ ಕಂಬಗಳು ಮತ್ತು ಟ್ರಾನ್ಸ್‌ಫಾರ್ಮರ್‌ ಗಳಿಗೆ ಹಾನಿಯಾಗಿದ್ದು, ಸರಿಪಡಿಸುವ ಕಾರ್ಯ ಭರ
ದಿಂದ ಸಾಗಿದೆ. ಶುಕ್ರವಾರ ಸಂಜೆ ವೇಳೆಗೆ ವಿದ್ಯುತ್‌ ಸೇವೆಯನ್ನು ಮರಳಿ ನೀಡಲಾಗುವುದು' ಎಂದರು.

ವಿಮಾನ, ರೈಲು ಸೇವೆ ಪುನರಾರಂಭ:

'ಡಾನಾ' ಆರ್ಭಟದಿಂದಾಗಿ ಭುವನೇಶ್ವರ ಮತ್ತು ಕೋಲ್ಕತ್ತದಲ್ಲಿ ಸ್ಥಗಿತಗೊಂಡಿದ್ದ ವಿಮಾನ ಮತ್ತು ರೈಲುಗಳ ಸೇವೆಯು ಶುಕ್ರವಾರ ಬೆಳಿಗ್ಗೆಯಿಂದ ಪುನಃ ಆರಂಭವಾಯಿತು.

ಬಿಜು ಪಟ್ನಾಯಕ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 9 ಗಂಟೆಗೆ ವಿಮಾನವೊಂದು ಬಂದಿಳಿಯುವ ಮೂಲಕ ಸೇವೆಯನ್ನು ಪುನರ್‌ ಆರಂಭಿಸಲಾಯಿತು ಎಂದು ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಝಿ ತಿಳಿಸಿದರು.

ಅಕ್ಟೋಬರ್‌ 24ರ ಸಂಜೆ 5 ಗಂಟೆಯಿಂದ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ರೈಲುಗಳ ಸೇವೆಯನ್ನು ಪುನರಾರಂಭಿಸಲಾಗಿದೆ ಎಂದು ಪೂರ್ವ ಕರಾವಳಿ ರೈಲ್ವೆ ಹೇಳಿಕೆ ಮೂಲಕ ತಿಳಿಸಿದೆ.

ಪೂರ್ವ ಕರಾವಳಿ ರೈಲ್ವೆಯು ಮುಂಜಾಗ್ರತಾ ಕ್ರಮವಾಗಿ ಸುಮಾರು 203 ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಿತ್ತು.

ಒಡಿಶಾದಲ್ಲಿ ಭಾರಿ ಮಳೆ:

ಚಂಡಮಾರುತದಿಂದಾಗಿ ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಶುಕ್ರವಾರ ಭಾರಿ ಮಳೆಯಾಯಿತು.

ಪ್ರಾದೇಶಿಕ ಹವಾಮಾನ ಕೇಂದ್ರದ ಪ್ರಕಾರ, ಭದ್ರಕ್‌ ಜಿಲ್ಲೆಯ ಚಾಂದ್‌ಬಾಲಿಯಲ್ಲಿ 24 ತಾಸುಗಳಲ್ಲಿ (ಗುರುವಾರ ಬೆಳಿಗ್ಗೆ 8.30ರಿಂದ ಶುಕ್ರವಾರದವರೆಗೆ) ಗರಿಷ್ಠ 158 ಎಂ.ಎಂ ಮಳೆಯಾಗಿದೆ. ರಾಜ್‌ಕನಿಕಾದಲ್ಲಿ 156 ಎಂ.ಎಂ ಮಳೆಯಾಗಿದೆ.

ಬಾಸುದೇವಪುರ, ಔಪದ, ರಾಜ್‌ನಗರ ಮುಂತಾದ ಪ್ರದೇಶಗಳಲ್ಲಿ 100 ಎಂ.ಎಂಗೂ ಅಧಿಕ ಮಳೆಯಾಗಿದೆ ಎಂದು ತಿಳಿಸಿದೆ.

ಕೇಂದ್ರಪಡಾ ಜಿಲ್ಲೆಯಲ್ಲಿ 85 ಎಂ.ಎಂ, ಭದ್ರಕ್‌ ಜಿಲ್ಲೆಯಲ್ಲಿ 67.1 ಎಂ.ಎಂ ಮಳೆ ಸುರಿದಿದೆ ಎಂದು ಅದು ಹೇಳಿದೆ.

ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿಯೂ ಶುಕ್ರವಾರ ಭಾರಿ ಮಳೆಯಾಗಿದೆ. ಕೋಲ್ಕತ್ತದಲ್ಲಿ ಮಧ್ಯಾಹ್ನ 11.30ರವರೆಗೆ 100 ಎಂ.ಎಂ ಮಳೆಯಾಗಿದೆ. ಧರ್ಮತಲಾ, ಬೆಹಾಲಾ, ಹಜ್ರಾ, ನ್ಯೂ ಮಾರ್ಕೆಟ್‌ ಸೇರಿದಂತೆ ಹಲವೆಡೆ ಸಾಕಷ್ಟು ಮಳೆ ಸುರಿದಿದೆ.

ಮುಂಜಾಗ್ರತಾ ಕ್ರಮವಾಗಿ ತಗ್ಗು ಪ್ರದೇಶಗಳಿಂದ 2.16 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಕೇರಳದಲ್ಲಿ 27ರವರೆಗೂ ಮಳೆ: ಐಎಂಡಿ

ತಿರುವನಂತಪುರ: ಕೇರಳದ ಹಲವು ಪ್ರದೇಶಗಳಲ್ಲಿ ಶುಕ್ರವಾರ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ರಸ್ತೆಗಳು ಜಲಾವೃತವಾಗಿ, ವಾಹನ ದಟ್ಟಣೆ ಉಂಟಾಗಿದೆ.

ತಿರುವನಂತಪುರ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶ್ಶೂರ್, ಪತ್ತನತಿಟ್ಟಂ, ಕೊಲ್ಲಂ, ಅಲಪ್ಪುಳ ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಅಲರ್ಟ್‌ ಘೋಷಣೆ ಮಾಡಿದೆ. ಇದಲ್ಲದೆ ಮತ್ತೆ ಮೂರು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌ ಘೋಷಿಸಿದೆ.

ರಾಜ್ಯದಲ್ಲಿ ಅಕ್ಟೋಬರ್‌ 27ರವರೆಗೂ ಭಾರಿ ಮಳೆಯಾಗುವ ಸಾಧ್ಯತೆ ಎಂದು ಅದು ಮುನ್ಸೂಚನೆ ನೀಡಿದೆ.

ಭೂಮಿಗೆ ಪೂರ್ಣ ಅಪ್ಪಳಿಸಲು ಎಂಟೂವರೆ ತಾಸು

'ಡಾನಾ' ಚಂಡಮಾರುತವು ಒಡಿಶಾದ ಧಾಮರ ಮತ್ತು ಭಿತರ್‌ಕನಿಕಾ ಪ್ರದೇಶಗಳ ನಡುವೆ ಭೂಮಿಗೆ ಅಪ್ಪಳಿಸಿದೆ. ಇದು ಭೂಮಿಗೆ ಅಪ್ಪಳಿಸುವ ಪ್ರಕ್ರಿಯೆಯು ಶುಕ್ರವಾರ ಮಧ್ಯರಾತ್ರಿ 12.05ಕ್ಕೆ ಆರಂಭವಾಗಿತ್ತು. ಎಂಟೂವರೆ ತಾಸುಗಳ ನಂತರ ಶುಕ್ರವಾರ ಬೆಳಿಗ್ಗೆ 8.30ಕ್ಕೆ ಅದು ಪೂರ್ಣಗೊಂಡಿತು ಎಂದು ಐಎಂಡಿ ತಿಳಿಸಿದೆ.

ಗಂಟೆಗೆ 110 ಕಿ.ಮೀ ವೇಗದಲ್ಲಿ ಅಪ್ಪಳಿಸಿದ್ದ 'ಡಾನಾ' ಸದ್ಯ ದುರ್ಬಲಗೊಳ್ಳುತ್ತಿದೆ. ಚಂಡಮಾರುತವು ಒಡಿಶಾದ ವಾಯವ್ಯದತ್ತ ಸಾಗುತ್ತಿದ್ದು, ಮುಂದಿನ ಆರು ತಾಸುಗಳಲ್ಲಿ ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಒಡಿಶಾದಲ್ಲಿ ರೆಡ್‌ ಅಲರ್ಟ್‌

ಒಡಿಶಾದಲ್ಲಿ ಶನಿವಾರ ಬೆಳಿಗ್ಗೆವರೆಗೂ ತೀವ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂದಾಜಿಸಿದೆ. ಭದ್ರಕ್‌, ಬಾಲೇಶ್ವರ, ಕೆಂದುಝರ್‌, ಮಯೂರ್‌ಬಂಜ್‌ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಿದೆ. ಕೇಂದ್ರಪಡಾ, ಕಠಕ್‌, ಜೈಪುರ, ಢೇಂಕಾನಾಲ್ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಿದೆ.

ಜಗತ್‌ಸಿಂಗ್‌ಪುರ, ಪುರಿ, ಖುರ್ದಾ, ನಯಾಗಢ, ಅಂಗುಲ್‌ ಜಿಲ್ಲೆಗಳಲ್ಲೂ ಸಾಕಷ್ಟು ಮಳೆಯಾಗಲಿದೆ ಎಂದು ಅಂದಾಜಿಸಿ ಯೆಲ್ಲೋ ಅಲರ್ಟ್‌ ಘೋಷಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries