ಭುವನೇಶ್ವರ: ಒಡಿಶಾದಲ್ಲಿ ಸುಮಾರು 35.95 ಲಕ್ಷ ಜನರು ಡಾನಾ ಚಂಡಮಾರುತದ ಪರಿಣಾಮ ಎದುರಿಸಿದ್ದಾರೆ. ರಾಜ್ಯದ 14 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಸಚಿವ ಸುರೇಶ್ ಪೂಜಾರಿ ಭಾನುವಾರ ತಿಳಿಸಿದ್ದಾರೆ.

ಮುನ್ನೆಚ್ಚರಿಕೆಯಾಗಿ 8.10 ಲಕ್ಷ ಜನರನ್ನು 6,210 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿತ್ತು. ಕೇಂದ್ರಪರ, ಬಾಲೇಶ್ವರ ಮತ್ತು ಭದ್ರಕ್‌ನಲ್ಲಿ ಭಾರಿ ಹಾನಿಯಾಗಿದ್ದರೂ, ಯಾವುದೇ ವ್ಯಕ್ತಿಯೂ ಮೃತಪಟ್ಟಿಲ್ಲ ಎಂದು ತಿಳಿಸಿದ್ದಾರೆ.
ಪ್ರವಾಹ ಸ್ಥಿತಿ ಸುಧಾರಿಸಿರುವ ಸ್ಥಳಗಳಿಗೆ ಮರಳಲು ಹಲವರಿಗೆ ಅವಕಾಶ ನೀಡಲಾಗಿದೆ. ಇನ್ನೂ 1,178 ಪರಿಹಾರ ಕೇಂದ್ರಗಳಲ್ಲಿ ಜನರು ಆಶ್ರಯ ಪಡೆದಿದ್ದಾರೆ. ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ ಎಂದಿದ್ದಾರೆ.
ಡಾನಾ ಚಂಡಮಾರುತವು ಶುಕ್ರವಾರ ಬೆಳಿಗ್ಗೆ ಹೊತ್ತಿಗೆ 14 ಜಿಲ್ಲೆಗಳಲ್ಲಿ 108 ಕೇಂದ್ರಗಳ 1,671 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಪ್ಪಳಿಸಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ, 5,840 ಮನೆಗಳಿಗೆ ಸಂಪೂರ್ಣ ಅಥವಾ ಭಾಗಶಃ ಹಾನಿಯಾಗಿದೆ ಎಂದು ಸಚಿವ ಹೇಳಿದ್ದಾರೆ.
'ಈವರೆಗೆ ನೈಸರ್ಗಿಕ ವಿಪತ್ತು ಸಂಭವಿಸಿದಾಗ ಜನರು ಮನೆಗಳನ್ನು ಕಳೆದುಕೊಳ್ಳುತ್ತಿದ್ದರು. ನಂತರ ಪರಿಹಾರ ಪಡೆಯುತ್ತಿದ್ದರು. ಆದರೆ, ಈ ಬಾರಿ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬಯಸುತ್ತಿದ್ದೇವೆ. ಅದಕ್ಕಾಗಿ ಇಟ್ಟಿಗೆ, ಸಿಮೆಂಟ್, ಕಬ್ಬಿಣ ಬಳಸಿ ನಿರ್ಮಿಸಿದ ಸುಸಜ್ಜಿತ ಮನೆಗಳನ್ನು ಹಂತ ಹಂತವಾಗಿ ವಿತರಿಸಲು ಬಯಸಿದ್ದೇವೆ' ಎಂದು ಮಾಹಿತಿ ನೀಡಿದ್ದಾರೆ.
ಚಂಡಮಾರುತ ಹಾಗೂ ಪ್ರವಾಹಪೀಡಿತ ಪ್ರದೇಶಗಳಲ್ಲಿ ಇರುವ ಕಚ್ಚಾ ಮನೆಗಳ ಸರ್ವೆ ನಡೆಸಲು ಒಡಿಶಾ ಸರ್ಕಾರ ಯೋಜಿಸಿದೆ.