ಕಾನ್ಪುರ : ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ಶವವು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹೂತು ಹಾಕಿದ್ದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಜಿಲ್ಲಾಧಿಕಾರಿಗಳ ಕಚೇರಿಯ ಕಾಂಪೌಂಡ್‌ನೊಳಗೆ 15 ಅಡಿ ಆಳದಲ್ಲಿ ಮಹಿಳೆಯ ಶವವನ್ನು ಹೂಳಲಾಗಿತ್ತು.
ಅಸ್ಥಿಪಂಜರವಾಗಿ ಮಾರ್ಪಟ್ಟಿದ್ದ ಶವವನ್ನು ಬಟ್ಟೆಯಿಂದಾಗಿ ಕುಟುಂಬಸ್ಥರು ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆಯನ್ನು ಕಾನ್ಪುರ ಮೂಲದ ಉದ್ಯಮಿಯೊಬ್ಬರ ಪತ್ನಿ ಎಂದು ಗುರುತಿಸಲಾಗಿದೆ. ಜಿಮ್ ತರಬೇತುದಾರ ವಿಮಲ್ ಸೋನಿ ಎಂಬಾತ ತನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆಯನ್ನು ಕೊಂದು, ಮೃತದೇಹವನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹೂತು ಹಾಕಿರುವುದು ತನಿಖೆ ವೇಳೆ ಬಯಲಾಗಿದೆ.
ಕ್ರೈಂ ಥ್ರಿಲ್ಲರ್ 'ದೃಶ್ಯಂ' ಸಿನಿಮಾದಿಂದ ಪ್ರೇರಣೆ ಪಡೆದಿದ್ದ ಆರೋಪಿ, ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶವ ಹೂತು ಹಾಕಿದರೆ ಪೊಲೀಸರಿಗೆ ತಿಳಿಯುವುದಿಲ್ಲ ಎಂದು ಭಾವಿಸಿ ಈ ಕೃತ್ಯ ಎಸಗಿದ್ದಾನೆ. ನಾಲ್ಕು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ವಿಮಲ್ ಸೋನಿ ಎಂಬ ಜಿಮ್ ತರಬೇತುದಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ವಿಮಲ್ ಸೋನಿ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಈ ವಿಷಯ ತಿಳಿದ ವಿವಾಹಿತ ಮಹಿಳೆಯು ಜೂನ್ 24ರಂದು ಸೋನಿಯೊಂದಿಗೆ ಜಗಳ ಮಾಡಿದ್ದಳು. ಆಗ ಆಕೆಯ ಮೇಲೆ ಹಲ್ಲೆ ನಡೆಸಿ, ಕತ್ತು ಹಿಸುಕಿ ಕೊಂದಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.