ತಮ್ಮ ರಾಜಕೀಯ ಬೆಳವಣಿಗೆ ಹಾಗೂ 2016-21ರ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದ ಎಐಎಡಿಎಂಕೆ ಸರ್ಕಾರದ ಬಗ್ಗೆ ಉದಯನಿಧಿ ಅವರು ನೀಡಿದ್ದ ಹೇಳಿಕೆಗಳಿಗೆ ನಗರದಲ್ಲಿ ನಡೆದ ಸಮಾವೇಶದಲ್ಲಿ ಪಳನಿಸ್ವಾಮಿ ತಿರುಗೇಟು ನೀಡಿದ್ದಾರೆ. ಡಿಎಂಕೆ ಪಕ್ಷದಲ್ಲಿ ಉನ್ನತ ಸ್ಥಾನಗಳಿಗೆ ಏರಲು ದಿವಂಗತ ಎಂ.ಕರುಣಾನಿಧಿ ಅವರ ಕುಟುಂಬದವರಿಗಷ್ಟೇ ಸಾಧ್ಯ ಎಂದು ತಿವಿದಿದ್ದಾರೆ.
2021ರಲ್ಲಿ ಅಧಿಕಾರಕ್ಕೇರಿದ ಡಿಎಂಕೆ ಸರ್ಕಾರದ ಕಳೆದ 41 ತಿಂಗಳ ಸಾಧನೆಯನ್ನು ಹುಡುಕಿದರೆ, 'ಏನೂ ಇಲ್ಲ' ಎಂಬ ಉತ್ತರ ಸಿಗುತ್ತದೆ. ಉದಯನಿಧಿಯನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇ ಸ್ಟಾಲಿನ್ ಅವರ ಏಕೈಕ ಸಾಧನೆ ಎಂದು ಚಾಟಿ ಬೀಸಿದ್ದಾರೆ.
46 ವರ್ಷದ ಉದಯನಿಧಿ ಅವರಿಗೆ 'ನಿನ್ನ ವಯಸ್ಸಿಗಿಂತಲೂ ಹೆಚ್ಚಿನ ಅನುಭವ ನನಗಿದೆ' ಎಂದಿರುವ ಪಳನಿಸ್ವಾಮಿ, ಎಐಎಡಿಎಂಕೆ ಪಕ್ಷಕ್ಕಾಗಿ 50 ವರ್ಷ ದುಡಿದಿದ್ದೇನೆ. 1974ರಿಂದ ಇಲ್ಲಿಯವರೆಗೆ ತಳಮಟ್ಟದಿಂದ ಹಲವು ಸ್ಥಾನಗಳನ್ನು ನಿಭಾಯಿಸಿದ್ದೇನೆ ಎಂದು ಹೇಳಿದ್ದಾರೆ.
1989ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದೆ ಎಂದು ತಿಳಿಸಿರುವ ಅವರು, ತಾವು ಏಕಾಏಕಿ ಪಕ್ಷದ ಉನ್ನತ ಸ್ಥಾನಕ್ಕೆ ಏರಿಲ್ಲ. ಪಕ್ಷ ಮತ್ತು ಸರ್ಕಾರದಲ್ಲಿ, ತಮ್ಮ ಬೆಳವಣಿಗೆಯು 5 ದಶಕಗಳ ಅವಧಿಯಲ್ಲಿ ಹಂತ ಹಂತವಾಗಿ ಸಾಗಿದೆ. ಡಿಸಿಎಂ (ಉದಯನಿಧಿ) ಇಂತಹ ಹಿನ್ನೆಲೆ ಹೊಂದಿದ್ದಾರೆಯೇ ಎಂದು ಕೇಳಿದ್ದಾರೆ. ಮುಂದುವರಿದು, 2021ರಲ್ಲಿ ಮೊದಲ ಸಲ ವಿಧಾನಸಭೆ ಪ್ರವೇಶಿಸಿದ ಉದಯನಿಧಿ, ಮುಂದಿನ ವರ್ಷವೇ ಸಚಿವರಾದರು. ನಂತರ ಉಪಮುಖ್ಯಮಂತ್ರಿಯೂ ಆದರು. ಅಲ್ಪ ಸಮಯದಲ್ಲಿ ಇಷ್ಟೆಲ್ಲ ಆಗಿವೆ ಎಂದಿದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯೂ ಆಗಿರುವ ಪಳನಿಸ್ವಾಮಿ, 'ಅರ್ಹತೆಯುಳ್ಳ ಬೇರೆ ನಾಯಕರೂ ಡಿಎಂಕೆ ಪಕ್ಷದಲ್ಲಿ ಇಲ್ಲವೇ' ಎಂದು ಪ್ರಶ್ನಿಸಿದ್ದಾರೆ.
'ಕರುಣಾನಿಧಿ ಅವರ ಮೊಮ್ಮಗ, ಸಿಎಂ ಸ್ಟಾಲಿನ್ ಅವರ ಮಗ ಎಂಬುದನ್ನು ಬಿಟ್ಟರೆ ಉದಯನಿಧಿಯ ಅಸ್ಮಿತೆ ಏನು?' ಎಂದು ಪ್ರಶ್ನಿಸಿರುವ ಪಳನಿಸ್ವಾಮಿ, 'ಹಲವು ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿ ಉದಯನಿಧಿಯನ್ನು ಡಿಸಿಎಂ ಮಾಡಲಾಗಿದೆ' ಎಂದು ಆರೋಪ ಮಾಡಿದ್ದಾರೆ.